ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 25ನೇ ಸ್ಥಾನ ಗಳಿಸಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅಲ್ಲದೇ ರಾಜ್ಯಕ್ಕೆ ಓರ್ವ ವಿದ್ಯಾರ್ಥಿನಿ ಪ್ರಥಮ ಸ್ಥಾನ ಗಳಿಸಿದರೆ, ಮೂವರು ವಿದ್ಯಾರ್ಥಿಗಳು ಎರಡನೇ ಸ್ಥಾನ ಗಳಿಸಿದರೆ, ನಾಲ್ವರು ಮೂರನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ.62.16ರಷ್ಟು ಫಲಿತಾಂಶ ದಾಖಲಿಸಿದ್ದು, ಈ ಮೂಲಕ ರಾಜ್ಯಕ್ಕೆ 25ನೇ ಸ್ಥಾನ ಗಳಿಸಿದೆ. ಕಳೆದ ಬಾರಿ 29ನೇ ಸ್ಥಾನ ಸಿಕ್ಕಿತ್ತು. ಒಟ್ಟು 31,771 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 19584 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ 7,861 ಬಾಲಕರು, 11,723 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಒಟ್ಟು 12,187 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಬಾಲಕಿಯರ ಮೇಲುಗೈ:
ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, ಖಾನಾಪುರ ತಾಲ್ಲೂಕಿನ ನಂದಗಡ ಸಂಗೊಳ್ಳಿ ರಾಯಣ್ಣ ಸ್ಮಾರಕ ವಸತಿ ಶಾಲೆಯ‌ ವಿದ್ಯಾರ್ಥಿನಿ ರೋಹಿಣಿ ಸಿದ್ದಪ್ಪ ಪಾಟೋಳಿ, ಬೆಳಗಾವಿ ನಗರದ ಸೆಂಟ್ ಜೊಸೆಫ್ ಕಾನ್ವೆಂಟ್ ಹೈಸ್ಕೂಲ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿಯರಾದ ನಿಧಿ ನಂದಕುಮಾರ ಕಂಗ್ರಾಳ್ಕರ್, ನೀಲಾಂಬಿಕಾ ಶಿವಾನಂದ ಬುಬನಾಳೆ 624 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಬೆಳಗಾವಿ ಮಹಿಳಾ ವಿದ್ಯಾಲಯ ಮಂಡಳ ಶಾಲೆಯ ಆಂಗ್ಲ ಮಾಧ್ಯಮದ ಅನ್ವಿತಾ ಅಭಿಜಿತ ತಳಗೇರಿ, ಬೈಲಹೊಂಗಲ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತಿ ಮಲ್ಲಿಕಾರ್ಜುನ ಬಿರಾದರ, ಬೈಲಹೊಂಗಲ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪದ್ಮಾವತಿ ಸುರೇಶ ನಜ್ಜರದ, ಬೆಳಗಾವಿ ಕೆಎಲ್ಎಸ್ ಆಂಗ್ಲ ಮಾಧ್ಯಮ ಶಾಲೆ ಸಮೃದ್ಧಿ ಸತೀಶ ಮೂಳ್ಯಾ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದಾರೆ.
ಡಿಡಿಪಿಐ ಹಿರೇಮಠ ಹರ್ಷ:
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಮಾಧ್ಯಮಗಳ ಜೊತೆಗೆ ಮಾತನಾಡಿ, ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ರೂಪಾ ಪಾಟೀಲ 625ಕ್ಕೆ 625 ಅಂಕ ಗಳಿಸಿರುವುದು ಸಂತದ ತಂದಿದೆ. ಆ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.‌ ವಾಡಿಕೆಯಂತೆ ಈ ಬಾರಿಯೂ ಬೆಳಗಾವಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಶೇ.72.68ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಇನ್ನು ತಾಲ್ಲೂಕುವಾರು ಫಲಿತಾಂಶ ಗಮನಿಸಿದರೆ ಇದೇ ಮೊದಲ ಬಾರಿಗೆ ಚನ್ನಮ್ಮ ಕಿತ್ತೂರು ತಾಲ್ಲೂಕು ಶೇ.67.89 ಫಲಿತಾಂಶ ದಾಖಲಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ಬೆಳಗಾವಿ ನಗರ ಶೇ.66.56, ಸವದತ್ತಿ ಶೇ.63.33, ಖಾನಾಪುರ 61.29, ಬೈಲಹೊಂಗಲ 59.33, ರಾಮದುರ್ಗ 58.13, ಬೆಳಗಾವಿ ಗ್ರಾಮೀಣ 54.74ರಷ್ಟು ಫಲಿತಾಂಶ ದಾಖಲಿಸಿವೆ ಎಂದು ವಿವರಿಸಿದರು.
ಮಗಳು ರಾಜ್ಯಕ್ಕೆ ಫಸ್ಟ್ ಬರುತ್ತಾಳೆ ಎಂಬ ನಿರೀಕ್ಷೆ ಇತ್ತು. ಇಂದು ಅದು ನಿಜ ಆಗಿದೆ. ತುಂಬಾ ಖುಷಿ ಆಗುತ್ತಿದೆ. ಮಗಳನ್ನು ವೈದ್ಯೆ ಮಾಡುವ ಆಶಯ ಹೊಂದಿದ್ದೇವೆ. ಗ್ರಾಮೀಣ ಭಾಗದ ಮಕ್ಕಳು ವೈದ್ಯರಾಗಿ, ಬಡ ಜನರಿಗೆ ಉತ್ತಮ ಸೇವೆ ನೀಡಬೇಕಿದೆ ಎನ್ನುತ್ತಾರೆ ಮೊದಲ ಸ್ಥಾನ ಪಡೆದಿರುವ ವಿದ್ಯಾರ್ಥಿನಿ ರೂಪಾ ತಂದೆ ಚನಗೌಡ ಪಾಟೀಲ.
ರೈತನ ಮಗಳಿಗೆ 2ನೇ ರ್ಯಾಂಕ್:
624 ಅಂಕ ಗಳಿಸಿರುವ ರೋಹಿಣಿ ಸಿದ್ದಪ್ಪ ಪಾಟೋಳಿ ಮೂಲತಃ ರಾಯಬಾಗ ತಾಲ್ಲೂಕಿನ ನಿಲಜಿ ಗ್ರಾಮದ ನಿವಾಸಿ. ಖಾನಾಪುರ ತಾಲ್ಲೂಕಿನ ನಂದಗಡ ಸಂಗೊಳ್ಳಿ ರಾಯಣ್ಣ ಸ್ಮಾರಕ ವಸತಿ ಶಾಲೆಯ‌ ವಿದ್ಯಾರ್ಥಿನಿ ಆಗಿದ್ದಾರೆ. ರೋಹಿಣಿ ತಂದೆ ರೈತನಾಗಿದ್ದು, ತಾಯಿ ಗೃಹಿಣಿ. ಬಡತನದ ಹಿನ್ನೆಲೆ ಹೊಂದಿರುವ ರೋಹಿಣಿ ನಿರಂತರ ಅಭ್ಯಾಸದ ಪರಿಣಾಮ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದ್ದಾಳೆ.