ಬೆಳಗಾವಿ: ಬೆಳಗಾವಿ ಉದ್ಯಮಿ ಬಸವರಾಜ್ ಅಂಬಿ ಅಪಹರಣ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದ್ದು, ಅಪಹರಣ ಕೇಸ್‌ನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆಯ ಹೆಸರು ತಳಕು ಹಾಕಿಕೊಂಡಿದೆ. ಪ್ರಕರಣದ ಕಿಂಗ್‌ಪಿನ್ ಆಗಿದ್ದ ಆ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ನಿವಾಸಿ ಆಗಿರುವ ಮಂಜುಳಾ ರಾಮನಗಟ್ಟಿ ಬಂಧಿತ ಆರೋಪಿ. ಘಟನೆ ಬಳಿಕ ನಾಪತ್ತೆ ಆಗಿ ಕಲಬುರಗಿಯಲ್ಲಿ ಮಂಜುಳಾ ಅವರು ತಲೆಮರೆಸಿಕೊಂಡಿದ್ದರು. ಆರಂಭದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಈಗ ಘಟಪ್ರಭಾ ಪೊಲೀಸರಿಂದ ಮಂಜುಳಾ ರಾಮನಗಟ್ಟಿ ಸೇರಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಜಮಖಂಡಿಯ ಪರುಶರಾಮ ಕಾಂಬಳೆ, ಯಮಕನಮರಡಿಯ ಯಲ್ಲೇಶ ವಾಲೀಕರ ಬಂಧಿತ ಮತ್ತಿಬ್ಬರು ಆರೋಪಿಗಳು. ಈ ಮೂಲಕ ಉದ್ಯಮಿ ಬಸವರಾಜ್ ಅಂಬಿ ಅಪಹರಣ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಗೋಕಾಕ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಬ್ಲ್ಯಾಕ್ ಅಧ್ಯಕ್ಷೆ ಆಗಿದ್ದ ಮಂಜುಳಾ ರಾಮನಗಟ್ಟಿ, ಸಚಿವ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಪುತ್ರ ಈಶ್ವರ ರಾಮನಗಟ್ಟಿ ಮೂಲಕ ಉದ್ಯಮಿಯನ್ನು ಅಪಹರಿಸಲಾಗಿತ್ತು. ಫೆ.20ರಂದು ದಂಡಾಪುರ ಕ್ರಾಸ್ ಬಳಿ ಸಿನಿಮೀಯ ರೀತಿಯಲ್ಲಿ ಬಸವರಾಜ್ ಅಂಬಿ ಅಪಹರಿಸಲಾಗಿತ್ತು. ಬಳಿಕ ಆರೋಪಿಗಳು ಐದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಪ್ರಕರಣದಲ್ಲಿ ಏಳೂ ಆರೋಪಿಗಳನ್ನು ಘಟಪ್ರಭಾ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ 18ರಂದು ಘಟಪ್ರಭಾ ಪೊಲೀಸ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ 24 ಗಂಟೆಯಲ್ಲಿ ಉದ್ಯಮಿಯನ್ನು ರಕ್ಷಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಮಾಹಿತಿ ಕೊಟ್ಟವರು ಕಾರಣರಾದವರಲ್ಲಿ ಮಂಜುಳಾ ರಾಮನಗಟ್ಟಿ, ಯಲ್ಲೇಶ್ ವಾಲಿಕಾರ, ಪರಶುರಾಮ ಕಾಂಬಳೆ ಎಂಬ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಯಲ್ಲೇಶ ವಾಲಿಕಾರ ಪ್ರಮುಖ ಆರೋಪಿಯಾಗಿದ್ದು, ಬಸವರಾಜ ಅಂಬಿಯನ್ನು ಕಿಡ್ನಾಪ್ ಮಾಡಿದವ ಈಶ್ವರ ರಾಮಗನಟ್ಟಿ. ಹಣ ವಸೂಲಿ ಮಾಡೋದಕ್ಕೆ ಇವರು ಪ್ರಯತ್ನಿರುತ್ತಾರೆ. ಬಸವರಾಜ ಮೈಮೇಲಿನ ಆಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈಶ್ವರನ ತಾಯಿ ಮಂಜುಳಾ ಪರಿಚಯ ಇರೋ ಪರಶುರಾಮ ಕಾಂಬಳೆಗೆ ಕರೆ ಮಾಡಿ ನನಗೆ ಹಣ ಕೊಡಬೇಕು. ಅವನಿಗೆ ನೀನು ಸಹಾಯ ಮಾಡಿದರೆ ನಿನಗೂ ದುಡ್ಡು ಕೊಡುವುದಾಗಿ ಮಂಜುಳಾ ಹೇಳಿದ್ದರು ಎಂದರು.
ಪರಶುರಾಮ ಕಾಂಬಳೆ ನೇತೃತ್ವದಲ್ಲಿ ಐದು ಕೋಟಿ ಹಣ ಕೇಳಿರುತ್ತಾರೆ. ಇದರಲ್ಲಿ ಮಂಜುಳಾ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ, ಅಪರಾಧಿಕ ಸಂಚಿನಡಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಸಾಮಾಜಿಕ ಸೇವೆ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಕುಲಗೋಡ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನೌಕರಿ ಕೊಡಿಸುವುದಾಗಿ ವಂಚನೆ ಮಾಡಿದ್ದಳು. ಕುಲಗೋಡ ಪ್ರಕರಣದಲ್ಲಿ ತನಿಖೆ ಮುಂದುವರೆಯುತ್ತಿದೆ. ಪರೀಕ್ಷೆ ಇಲ್ಲದೇ ನೌಕರಿ ಕೊಡಿಸುತ್ತೇವೆ ಎಂಬ ಮಾತಿಗೆ ಮರುಳಾಗಿ, ಮೋಸ ಹೋಗಬೇಡಿ ಎಂದು ಡಾ. ಭೀಮಾಶಂಕರ ಗುಳೇದ ಕಿವಿಮಾತು ಹೇಳಿದರು.