ಬೆಳಗಾವಿ: ದೇಶದಲ್ಲಿ ಮೊದಲ ಮಹಿಳಾ ಸೈನ್ಯ ಕಟ್ಟಿದ್ದ ಉತ್ತರ ಕರ್ನಾಟಕದ ದಿಟ್ಟ ಮಹಿಳೆ. ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿದ್ದ ವೀರ ರಾಣಿ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಹೆಮ್ಮೆ. ಇಂದಿನ ಯುವ ಪೀಳಿಗೆಗೆ ಬೆಳವಡಿ ಮಲ್ಲಮ್ಮನವರ ಶೌರ್ಯ, ಸಾಹಸ ತಿಳಿಸಲು ಫೆ.28 ಮತ್ತು ಮಾರ್ಚ್ 1ರಂದು ಎರಡು ದಿನಗಳ ಕಾಲ ರಾಜ್ಯ ಸರ್ಕಾರ ಬೆಳವಡಿ ಉತ್ಸವ ಆಚರಿಸುತ್ತಿದೆ.ಆದರೆ, ಈವರೆಗೂ ಮಲ್ಲಮ್ಮಾಜಿ ಸಮಾಧಿ ಗೊಂದಲ ಮಾತ್ರ ಬಗೆಹರಿದಿಲ್ಲ. ಅಲ್ಲದೇ ರಾಷ್ಟ್ರಮಟ್ಟದಲ್ಲಿ ಅವರಿಗೆ ಸಿಗಬೇಕಾದ ಗೌರವ, ಪ್ರಚಾರ ಸಿಗದಿರುವುದು ಈ ಭಾಗದ ಜನರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಗಂಡು ಮೆಟ್ಟಿದ ನಾಡು ಬೈಲಹೊಂಗಲವು ಬೆಳಗಾವಿ ಜಿಲ್ಲೆಗೆ ಕಳಶಪ್ರಾಯವಾದ ನೆಲೆಬೀಡು. ಹಲವು ಶೂರ, ಧೀರರನ್ನು ನಾಡಿಗೆ ಕೊಡುಗೆ ಕೊಟ್ಟ ಪುಣ್ಯಭೂಮಿ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಕೂಗು ಎದ್ದಿದ್ದು ಇಲ್ಲಿಂದಲೇ. ಇಂಥ ನಾಡಿನಲ್ಲಿ ಬೆಳವಡಿ ಮಲ್ಲಮ್ಮ ಮಹಾರಾಣಿಯ ಚರಿತ್ರೆ ವೈಶಿಷ್ಟಪೂರ್ಣವಾಗಿದೆ. ಸ್ತ್ರೀ ಕುಲದ ಪ್ರತೀಕ, ಸ್ವಾಭಿಮಾನ ಸಂಕೇತವಾಗಿ ಇತಿಹಾಸದಲ್ಲಿ ಚಿರಸ್ಥಾಯಿ ಆಗಿದ್ದಾರೆ. ಬೆಳವಡಿ ಸಂಸ್ಥಾನದ 28ನೇ ದೊರೆ ಈಶಪ್ರಭು ಅವರ ಧರ್ಮಪತ್ನಿಯೇ ಬೆಳವಡಿಯ ಮಹಾರಾಣಿ ಮಲ್ಲಮ್ಮ.
ಕಿರು ಪರಿಚಯ: ಇಂದಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂಧಾದಲ್ಲಿ 1,660ರಲ್ಲಿ ಮಲ್ಲಮ್ಮ ಜನಿಸುತ್ತಾರೆ. ತಂದೆ ರಾಜ ಮಧುಲಿಂಗನಾಯಿಕ, ತಾಯಿ ರಾಣಿ ವೀರಮ್ಮಾಜಿ. ಬಾಲ್ಯದಲ್ಲೇ ಅಪ್ರತಿಮ ವೀರಳಾಗಿದ್ದ ಮಲ್ಲಮ್ಮ, ಯುದ್ಧ ಪರಿಣತಿ ಹೊಂದಿದ್ದರು. ಮುಂದೆ 1676ರಲ್ಲಿ ಬೆಳವಡಿ ಸಂಸ್ಥಾನದ ರಾಜ ಈಶಪ್ರಭುವಿನ ಜೊತೆ ಮದುವೆ ಮಾಡಿಕೊಡುತ್ತಾರೆ. ಈಶಪ್ರಭುಗಳ ಕಾಲಾನಂತರದಲ್ಲಿ ಬೆಳವಡಿ ಸಂಸ್ಥಾನವನ್ನು 40 ವರ್ಷಗಳ ಕಾಲ ಮಲ್ಲಮ್ಮ ಮುನ್ನಡೆಸಿದ್ದರು. ನಂತರ ಅವರ ಸುಪುತ್ರ ನಾಗಭೂಷಣ ದೊರೆ ಸಂಸ್ಥಾನದ ಚುಕ್ಕಾಣಿ ಹಿಡಿಯುತ್ತಾರೆ. 1,712 ರಲ್ಲಿ ರಾಣಿ ಮಲ್ಲಮ್ಮ ಅವರು ಲಿಂಗೈಕ್ಯರಾಗುತ್ತಾರೆ.
ಶಿವಾಜಿ ಸೈನ್ಯಕ್ಕೆ ಸೋಲಿನ ರುಚಿ: ಮಾಹಿತಿ ನೀಡಿದ ಸಂಶೋಧಕ ಡಾ. ಬಾಳಪ್ಪ ಚಿನಗುಡಿ, ದಕ್ಷಿಣ ಭಾಗದ ದಂಡಯಾತ್ರೆ ಮುಗಿಸಿ ಶ್ರೀಶೈಲ, ಕೊಪ್ಪಳ, ಆನೆಗುಂದಿ, ಗದಗ, ಧಾರವಾಡ ಕೋಟೆ ವಶಪಡಿಕೊಂಡು ಯಾದವಾಡದಲ್ಲಿ ಶಿವಾಜಿ ಸೈನ್ಯ ಬೀಡು ಬಿಟ್ಟಿರುತ್ತದೆ. ರಾಜಾ ಈಶಪ್ರಭು ಮತ್ತು ರಾಣಿ ಮಲ್ಲಮ್ಮ ಅವರು ಶಿವಾಜಿ ಸೈನ್ಯವನ್ನು ಪ್ರೀತಿ ಆದರದಿಂದ ಬರಮಾಡಿಕೊಳ್ಳಲು ಸಜ್ಜಾಗಿರುತ್ತಾರೆ.
ಆದರೆ, ಶಿವಾಜಿ ಸೈನಿಕರು ಬೆಳವಡಿ ಸಂಸ್ಥಾನದಲ್ಲಿನ ರೈತರು ಬೆಳೆದಿದ್ದ ದವಸ, ಧಾನ್ಯ, ಮೇವು ಜಾನುವಾರುಗಳನ್ನು ಹೇಳದೇ ಕೇಳದೇ ಹೊತ್ತೊಯ್ಯುತ್ತಾರೆ. ಇದು ಈಶಪ್ರಭು ಅವರನ್ನು ಕೆರಳಿಸುತ್ತದೆ. ಕೂಡಲೇ ಅವರು ಈರಯ್ಯ ರೊಟ್ಟಿ ಎಂಬ ಧೂತರನ್ನು ಯಾದವಾಡಕ್ಕೆ ಕಳಿಸಿಕೊಡುತ್ತಾರೆ. ಆದರೆ, ಅಲ್ಲಿ ಅವರಿಗೆ ಅಪಮಾನ ಮಾಡಿ ಕಳಿಸಿಕೊಡುತ್ತಾರೆ.
ಇದು ಬೆಳವಡಿ ಸಂಸ್ಥಾನದ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಶಿವಾಜಿ ಸೈನ್ಯದ ವಿರುದ್ಧ ಯುದ್ಧಕ್ಕೆ ಇಳಿದೇ ಬಿಡುತ್ತಾರೆ. ವೀರಾವೇಶದಿಂದ ಹೋರಾಡುವಾಗ ಈಶಪ್ರಭು ಅಸುನೀಗುತ್ತಾರೆ. ಆದರೂ, ಧೃತಿಗೆಡದ ಮಲ್ಲಮ್ಮಾಜಿ ಯುದ್ಧ ಮುಂದುವರಿಸಿ, ಬೆಳವಡಿಗೆ ಗೆಲುವು ತಂದು ಕೊಡುತ್ತಾಳೆ. ಸುಮಾರು 4 ಸಾವಿರ ಮಹಿಳೆಯರನ್ನು ಒಳಗೊಂಡ ಸೈನ್ಯವನ್ನು ಮಲ್ಲಮ್ಮಾ ಸಿದ್ಧಪಡಿಸಿದ್ದರು. ನಿರಂತರವಾಗಿ 27 ದಿನ ಯುದ್ಧ ನಡೆಯುತ್ತದೆ. ಅವರು ಹೊತ್ತೊಯ್ದಿದ್ದ ಜಾನುವಾರುಗಳು ಮತ್ತು ಅವರ ಜಾನುವಾರುಗಳನ್ನು ಮಲ್ಲಮ್ಮ ವಶಕ್ಕೆ ಪಡೆದು ಶಿವಾಜಿ ಸೈನ್ಯ ಸೋಲಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಸಹೋದರಿ ಎಂದು ಒಪ್ಪಿದ ಶಿವಾಜಿ: “ಮಲ್ಲಮ್ಮಾಜಿ ಪರಾಕ್ರಮ ಮೆಚ್ಚಿ ಯಾದವಾಡಕ್ಕೆ ಶಿವಾಜಿ ಮಹಾರಾಜರು ಆಗಮಿಸುತ್ತಾರೆ. ಇಲ್ಲಿ ಇಬ್ಬರ ನಡುವೆ ಸಂಧಾನ ಸಭೆ ನಡೆಯುತ್ತದೆ. ಈ ವೇಳೆ, ಶಿವಾಜಿ ಮಹಾರಾಜರು ಈಶಪ್ರಭು ಅವರು ಯುದ್ಧದಲ್ಲಿ ಮೃತರಾಗಿದ್ದಕ್ಕೆ ಮಲ್ಲಮ್ಮನವರ ಕ್ಷಮೆ ಕೇಳುತ್ತಾರೆ. ನೀನು ನನ್ನ ತಾಯಿ ಸ್ವರೂಪ ಮತ್ತು ಸಹೋದರಿ ಎಂದು ಒಪ್ಪಿಕೊಳ್ಳುತ್ತೇನೆ. ನಿನ್ನ ರಕ್ಷಣೆಗೆ ಸದಾಸಿದ್ಧ ಎಂದು ಹೇಳಿ 342 ಹಳ್ಳಿಗಳನ್ನು ಅವರಿಗೆ ಶಿವಾಜಿ ಬಿಟ್ಟು ಕೊಡುತ್ತಾರೆ” ಎಂದು ಡಾ. ಬಾಳಪ್ಪ ಚಿನಗುಡಿ ವಿವರಿಸಿದರು.
ಕುರುಹುಗಳನ್ನು ಸಂರಕ್ಷಿಸಿ: ಬೈಲಹೊಂಗಲ ಸಮೀಪದ ಮುಳಕೂರ (ನಯಾನಗರ) ಗ್ರಾಮದಲ್ಲಿ ಬೆಳವಡಿ ಸಂಸ್ಥಾನದ ದೇಸಾಯಿ ಮನೆತನಕ್ಕೆ ಸೇರಿದ ಜಮೀನಿನಲ್ಲಿ ಮಲ್ಲಮ್ಮಾಜಿ ಸಮಾಧಿ ಇದೆ. ಅದು ಮಲಪ್ರಭಾ ನದಿಯಲ್ಲಿ ಮುಳುಗಡೆಯಾಗಿದ್ದು, ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕಿದೆ. ಬೆಳವಡಿ ಸಂಸ್ಥಾನಕ್ಕೆ ಸೇರಿದ ಸವದತ್ತಿ ತಾಲೂಕಿನ ಹೂಲಿಯಲ್ಲಿರುವ ಪಂಚವಣ್ಣಿಗಿ ಬ್ರಹನ್ಮಠದಲ್ಲಿರುವ ಮೂಲ ದಾಖಲೆಗಳು, ದಾನಶಾಸನ, ಗ್ರಂಥಗಳು ಅಲ್ಲಿವೆ.
ಅವುಗಳನ್ನು ಸಂಗ್ರಹಿಸಿ ಒಂದು ಮ್ಯೂಸಿಯಂ ಸ್ಥಾಪಿಸಿ ಜನರಿಗೆ ನೋಡುವ ಅವಕಾಶ ಕಲ್ಪಿಸಬೇಕು. ಶಿವಾಜಿ – ಮಲ್ಲಮ್ಮನ ಯುದ್ಧದ ಪ್ರತೀಕವಾದ ವೀರಗಲ್ಲು ಧಾರವಾಡ ಜಿಲ್ಲೆಯ ಯಾದವಾಡದ ಹನುಮಂತೇಶ್ವರ ದೇವಸ್ಥಾನದ ಮುಂಭಾಗದಲ್ಲಿವೆ. ಬೆಳವಡಿ, ಸಿದ್ಧಸಮುದ್ರ, ಚಚಡಿ, ಮುತವಾಡ, ಸತ್ತಿಗೇರಿ, ದೊಡ್ಡವಾಡ, ಕೋಟೂರ ಸೇರಿ ಮತ್ತಿತರ ಕಡೆ ಇರುವ ವೀರಗಲ್ಲು ಮತ್ತು ಶಾಸನಗಳು. ಧಾರವಾಡ ಜಿಲ್ಲೆಯ ಲಕಮಾಪುರದ ತೋಪುಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಅದೇ ರೀತಿ ಮಲ್ಲಮ್ಮನ ಹೆಸರಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವ ವಿದ್ಯಾಲಯ ಆರಂಭಿಸಬೇಕು. ಭಾರತೀಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮನ ಹೆಸರಿಡುವಂತೆ” ಎಂದು ಡಾ. ಬಾಳಪ್ಪ ಚಿನಗುಡಿ ಒತ್ತಾಯಿಸುತ್ತಾರೆ.
ಪ್ರಾಧಿಕಾರ ರಚಿಸಿ: ಹಿರಿಯ ಕಾದಂಬರಿಕಾರ ಮತ್ತು ಸಂಶೋಧಕ ಯ.ರು. ಪಾಟೀಲ ಮಾತನಾಡಿ, “ಮಲ್ಲಮ್ಮನ ಶೌರ್ಯ, ಸಾಹಸ ಇಂದಿನ ಪೀಳಿಗೆಗೆ ಅದರಲ್ಲೂ ಮಹಿಳೆಯರಿಗೆ ಪ್ರೇರಣಾದಾಯಿ ಆಗಬೇಕಿದೆ. ಆ ನಿಟ್ಟಿನಲ್ಲಿ ತುರ್ತಾಗಿ ಮಲ್ಲಮ್ಮನವರ ಹೆಸರಲ್ಲಿ ಪ್ರಾಧಿಕಾರ ರಚನೆಯಾಗಬೇಕು. ಮಲ್ಲಮ್ಮಾಜಿ ಹುಟ್ಟಿದಾಗಿನಿಂದ ಲಿಂಗೈಕ್ಯರಾಗುವವರೆಗಿನ ಜೀವನ ಚರಿತ್ರೆ ಕಟ್ಟಿ ಕೊಡುವ ರಾಕ್ ಗಾರ್ಡನ್ ನಿರ್ಮಿಸಬೇಕು. ಅದೇ ರೀತಿ ಮಹಿಳಾ ಸೈನ್ಯ ಕಟ್ಟುವ ಮೂಲಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಹಾಗಾಗಿ, ಭಾರತೀಯ ಸೇನೆಯಲ್ಲಿ ಒಂದು ಬಟಾಲಿಯನ್ಗೆ ರಾಣಿ ಮಲ್ಲಮ್ಮನ ಹೆಸರಿಡಬೇಕು ಎಂದು ಆಗ್ರಹಿಸಿದರು.
ಸಮಾಧಿ ಗೊಂದಲ: ಕೆಲ ಸಂಶೋಧಕರು ಬೈಲಹೊಂಗಲ ತಾಲೂಕಿನ ಮುಳಕೂರ (ನಯಾನಗರ) ಬಳಿ ಮಲಪ್ರಭಾ ನದಕಮ ದಂಡೆಯ ಮೇಲೆ ಮಲ್ಲಮ್ಮನವರ ಸಮಾಧಿ ಇದೆ ಎಂದು ವಾದಿಸಿದರೆ, ಮತ್ತೊಂದಿಷ್ಟು ಸಂಶೋಧಕರು ಬೆಳವಡಿ ಗ್ರಾಮದ ಸಮೀಪ ಇರುವ ಸಿದ್ದಸಮುದ್ರದ ಸಿದ್ದೇಶ್ವರ ದೇವಸ್ಥಾನ ಪಕ್ಕದ ಆಲದ ಮರದ ಮುಂದೆ ಸಮಾಧಿ ಇದೆ ಎನ್ನುತ್ತಿದ್ದಾರೆ. ಅಲ್ಲಿನ ಆಲದ ಮರಕ್ಕೆ ಮಲ್ಲಮ್ಮನ ಮರ ಅಂತಾನೂ ಕರೆಯುತ್ತಾರೆ. ಹಾಗಾಗಿ, ಇದು ಇತಿಹಾಸ ಪ್ರಿಯರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ನಿಜವಾಗಲೂ ಮಲ್ಲಮ್ಮಾಜಿ ಸಮಾಧಿ ಗೊಂದಲ ಬಗೆಹರಿಸಬೇಕು ಎಂದು ಈ ಭಾಗದ ಜನರು ಆಗ್ರಹಿಸುತ್ತಿದ್ದಾರೆ.
ಶಾಲಾ-ಕಾಲೇಜು ಪಠ್ಯದಲ್ಲಿ ಮಲ್ಲಮ್ಮನವರ ಇತಿಹಾಸ ಸೇರಿಸಲು ಒತ್ತಾಯ: ಬೆಳವಡಿ ನಾಗರಿಕ ಪ್ರಕಾಶ ಹುಂಬಿ ಮಾತನಾಡಿ, “ಮಲ್ಲಮ್ಮಾಜಿ ಇತಿಹಾಸ ಚಿರಸ್ಥಾಯಿಗೊಳಿಸಲು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಶಾಲಾ-ಕಾಲೇಜು ಪಠ್ಯದಲ್ಲಿ ಮಲ್ಲಮ್ಮನವರ ಇತಿಹಾಸ ಸೇರಿಸಬೇಕು. ಬೆಳವಡಿಯಲ್ಲಿ ಶಿಲ್ಪವನ(ರಾಕ್ ಗಾರ್ಡನ್) ನಿರ್ಮಿಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ನಮ್ಮ ರಾಣಿ ಮಲ್ಲಮ್ಮವರ ಸಮಾಧಿ ಸ್ಥಳ ನಮಗೆ ಹುಡುಕಿ ಕೊಡಬೇಕು. ಮ್ಯೂಸಿಯಂ ಸ್ಥಾಪಿಸಬೇಕು. ಮಲ್ಲಮ್ಮನವರ ಇತಿಹಾಸವನ್ನು ಇಂದಿನ ಪೀಳಿಗೆಗೆ ಕಟ್ಟಿ ಕೊಡುವ ಕೆಲಸ ಮಾಡಬೇಕು. ಅಲ್ಲದೇ ಬೆಳವಡಿಯನ್ನು ತಾಲೂಕು ಅಂತಾ ಘೋಷಿಸಬೇಕು” ಎಂಬುದು ಬೆಳವಡಿಯ ಮತ್ತೋರ್ವ ನಾಗರಿಕ ವಿಠಲ ಪೀಸೆ ಅವರ ಒತ್ತಾಯ.
ಹೋರಾಟಗಾರ ಧರ್ಮರಾಜ ಗೌಡರ ಮಾತನಾಡಿ, “ಎರಡು ಕಡೆ ಸಮಾಧಿ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ. ಇದರಿಂದ ಎಲ್ಲರಿಗೂ ಗೊಂದಲ ಉಂಟಾಗುತ್ತಿದೆ. ಹಾಗಾಗಿ, ಸರ್ಕಾರ ಮೂಲ ಸಮಾಧಿ ಗುರುತಿಸಿ ಅಭಿವೃದ್ಧಿ ಪಡಿಸಿದರೆ ನಾಡಿನ ಮೂಲೆ ಮೂಲೆಯಿಂದ ಬರುವ ಜನರಿಗೆ ಮಲ್ಲಮ್ಮನವರ ಸಮಾಧಿ ದರ್ಶನ ಆಗುತ್ತದೆ” ಎಂದು ಹೇಳಿದರು.