ಬೆಳಗಾವಿ: ಕೇಂದ್ರ ಲೋಕ ಸೇವಾ ಆಯೋಗವು ಪ್ರಸಕ್ತ ಸಾ.ಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಬೆಳಗಾವಿ ಜಿಲ್ಲೆಯ ಇಬ್ಬರು ಉತ್ತೀರ್ಣರಾಗಿದ್ದಾರೆ. ಅದರಲ್ಲಿ  ಶೃತಿ ಯರಗಟ್ಟಿ ಯುವತಿಯು 362ನೇ ರ್ಯಾಂಕ ಪಡೆದು ಸಾಧನೆಗೈಯುವಲ್ಲಿ ಯಶಸ್ವಿಯಾಗಿದ್ದಾಳೆ.

ರಾಜ್ಯದಲ್ಲಿ 25 ಅಭ್ಯರ್ಥಿಗಳು ಲೋಕ ಸೇವಾ ಆಯೋಗದ ಪರೀಕ್ಷೇಯಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೂಡಲಗಿ ತಾಲೂಕಿನ ಅರಭಾವಿಮಠದ ನಿವಾಸಿಯಾಗಿರುವ ಶೃತಿ ಯರಗಟ್ಟಿ ಅವರು ಸದ್ಯಕ್ಕೆ ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರಾದ ಅವರು, ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ, ಧಾರವಾಡದ ಕೆಸಿಡಿ ಮಹಾವಿದ್ಯಾಲಯದಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿಎಸ್‌ಸಿ ಪದವಿಯಲ್ಲಿ 7 ಚಿನ್ನದ ಪದಕ ಗಳಿಸಿದ್ದ ಶೃತಿ ಅವರು ಆರನೇ ಬಾರಿಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 362ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಗುರಿ ತಲುಪಿದ್ದಾರೆ. ನಿವೃತ್ತ ಶಿಕ್ಷಕ ಶಿವಾನಂದ ಯರಗಟ್ಟಿ, ಮಹಾನಂದಾ ದಂಪತಿಯ ಹಿರಿಯ ಸುಪುತ್ರಿ ಶೃತಿ, ಸದ್ಯ ಬೆಂಗಳೂರಿನ ವಿಜಯನಗರದ ಪಿಜಿಯಲ್ಲಿ ವಾಸವಿದ್ದಾರೆ. ಮಗಳ ಸಾಧನೆಗೆ ತಂದೆ-ತಾಯಿ, ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ನಿಪ್ಪಾಣಿ ತಾಲೂಕಿನ  ಬೆಡಕಿಹಾಳ ಶಮನೆವಾಡಿಯ ಅಕ್ಷಯ ಪಾಟೀಲ ಅವರು 746ನೇ ರ್ಯಾಂಕ ಪಡೆದು ಉತ್ತೀರ್ಣರಾಗಿದ್ದಾರೆ. ಸದ್ಯಕ್ಕೆ ಇವರು ಬೆಂಗಳೂರಿನಲ್ಲಿ ತಹಶೀಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಗರೀಕ ಸೇವಾ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಇದರಲ್ಲಿ 322 ಮಹಿಳೆಯರು ಸೇರಿದ್ದಾರೆ.ನಾಗರೀಕ ಸೇವಾ ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. (ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ)