ಬೆಳಗಾವಿ, ಜ. 17: ಕ್ರಾಂತಿವೀರ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಮತ್ತು ನೇಣುಗಂಬಕ್ಕೇರಿದ ಖಾನಾಪುರ ತಾಲ್ಲೂಕಿನ ನಂದಗಡದ ಸಮಗ್ರಅಭಿವೃದ್ಧಿಗೆ ಸರಕಾರ ಬದ್ಧವಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ್ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡ ಅಭಿವೃದ್ಧಿಗೆ 2016-17 ನೇ ಸಾಲಿನಲ್ಲಿ ಪ್ರಾಧಿಕಾರ ರಚಿಸಲಾಗಿದೆ. ರಾಯಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿಗೆ ರಚಿಸಲಾದ ಪ್ರಾಧಿಕಾರಕ್ಕೆ ನೂರು ಎಕರೆ ಜಮೀನು ನೀಡಲಾಯಿತು.
ಅಪ್ಪಟ ದೇಶಭಕ್ತ ರಾಯಣ್ಣ ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಾರಣಕ್ಕ 267 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆ, ಶಿಲ್ಪವನ ನಿರ್ಮಿಸಲಾಗಿದೆ. ಬಾಲಕಿಯರು ಸೇರಿದಂತೆ 230 ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ದೇಶಪ್ರೇಮ ಬೆಳೆಸಲು ಶಾಲೆ ಪ್ರೇರಣೆಯಾಗಿದೆ. ಸಂಗೊಳ್ಳಿ ರಾಯಣ್ಣನಲ್ಲಿದ್ದ ತಾಯ್ನಾಡಿನ ಪ್ರೇಮವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಮೊಗಲರು ಹಾಗೂ ಬ್ರೀಟಿಷರು ಸ್ವಂತ ಸಾಮರ್ಥ್ಯದಿಂದ ಭಾರತವನ್ನು ಆಳಲಿಲ್ಲ; ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನಮ್ಮನ್ನು ಆಳುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.
ಹಲಗಲಿ ಬೇಡರ ಹೋರಾಟ ಸ್ಮರಣೀಯ: ಸುರಪುರದ ವೆಂಕಟಪ್ಪನಾಯಕ, ಹಲಗಲಿ ಬೇಡರು, ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಅನೇಕ ಜನರು ಬ್ರಿಟೀಷರ ವಿರುದ್ಧ ಹೋರಾಡಿದವರು. ಇವರ ದೇಶಪ್ರೇಮ ಸ್ಮರಣೀಯವಾಗಿದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಇಂತಹ ಮಹನೀಯರ ಹೋರಾಟದ ಬದುಕು, ಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ಅನ್ನ ನೀಡುವ ರೈತರು; ಅಕ್ಷರ ಕಲಿಸುವ ಶಿಕ್ಷಕರು ಹಾಗೂ ದೇಶ ಕಾಯುವ ಸೈನಿಕರ ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ನಾವು ಸಂಗೊಳ್ಳಿ ರಾಯಣ್ಣ ಆಗದಿದ್ದರೂ ಪರವಾಗಿಲ್ಲ. ಅವರ ದೇಶಪ್ರೇಮವನ್ನಾದರೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಜಾತಿಧರ್ಮ ಬದಿಗಿಟ್ಟು ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಸೈನಿಕ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಪ್ರಾಧಿಕಾರಕ್ಕೂ ಆರ್ಥಿಕ ನೆರವು ಒದಗಿಸಲಾಗುವುದು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಸಭ್ಯಸ್ಥ ರಾಜಕಾರಣಿ; ಅವರಂತಹ ಸಭ್ಯರು ಹಾಗೂ ಜಾತ್ಯಾತೀತರು ರಾಜಕಾರಣಕ್ಕೆ ಬರಬೇಕು. ಸೈನಿಕ ಶಾಲೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರವೇಶ ಕಲ್ಪಿಸಲು ಅವಕಾಶ ಕಲ್ಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.