ಬೆಳಗಾವಿ : ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಭಕ್ತಾದಿಗಳ ಅನುಕೂಲಕ್ಕಾಗಿ ಸವದತ್ತಿ ಮಾರ್ಗವಾಗಿ ಲೋಕಾಪುರ – ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ಪ್ರಾಥಮಿಕ ಹಂತದಲ್ಲಿ ಅವಶ್ಯವೆನಿಸಿರುವ ಮಾರ್ಗ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನವದೆಹಲಿಯ ರೈಲ್ವೆ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿ, ವಿನಂತಿಸಿದರು.
2019 ರಲ್ಲಿ ಪ್ರಸ್ತಾಪಿತ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಸಮೀಕ್ಷೆ ಕಾರ್ಯವನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು, ಆದರೆ, ಈ ಮಾರ್ಗದಲ್ಲಿ ರೈಲು ಜನದಟ್ಟಣೆ ಆಗದು ಎಂದು ಪ್ರಸ್ತಾಪಿಸಿ, ಯೋಜನೆ ಫಲಕಾರಿಯಲ್ಲ ಎಂದು ವರದಿ ನೀಡಿದ್ದು ಇಲ್ಲಿ ಸ್ಮರಣೀಯ.
ಆದರೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ 2022 -23 ನೇ ಸಾಲಿನಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023 ರ ವರೆಗೆ) ಅಂದಾಜು ಒಂದು ಕೋಟಿ ಇಪ್ಪತ್ಮೂರು ಲಕ್ಷ ಜನ ಭಕ್ತಾದಿಗಳು ( 87 ಲಕ್ಷ ಜನ ದರ್ಶನ ಪಡೆದದ್ದು, 35 ಲಕ್ಷ ಜನಸಾಂದ್ರತೆ ಇದ್ದಿದ್ದರಿಂದ ದರ್ಶನ ಪಡೆಯದೆ ಇದ್ದವರು ) ದೇಶದ ವಿವಿಧ ಭಾಗಗಳಿಂದ ದೇವಿಯ ದರ್ಶನಕ್ಕೆ ಬಂದು ಹೋಗಿದ್ದರ ಕುರಿತು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಯೋಜನೆಡಿಯಲ್ಲಿ ಈಗಾಗಲೇ ನೂರಾರು ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸುಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಮಾರ್ಗದ ರೈಲು ಮಾರ್ಗ ನಿರ್ಮಾಣಕ್ಕಾಗಿ ಪುನಃ ಸಮೀಕ್ಷೆ ಕಾರ್ಯ ಕೈಗೊಳ್ಳುವುದು ಅವಶ್ಯವೆಂದು ಜಗದೀಶ ಶೆಟ್ಟರ ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.
ರೈಲ್ವೆ ಸಚಿವರು ಮುಂಬರುವ ದಿನಗಳಲ್ಲಿ ಲೋಕಾಪುರ – ಸವದತ್ತಿ – ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ಸಮೀಕ್ಷೆ ಕಾರ್ಯವನ್ನು ನಡೆಸುವ ವಿಷಯ ಪರಿಶೀಲಿಸುವ ಕುರಿತು ಭರವಸೆ ನೀಡಿದ್ದಾರೆ.
ಇನ್ನು ಬೆಂಗಳೂರು – ಧಾರವಾಡ ನಡುವೆ ಸದ್ಯ ಚಲಿಸುತ್ತಿರುವ “ವಂದೇ ಭಾರತ” ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆಸಿದ್ದು, ಸಮಯವನ್ನು ಹೊಂದಿಸಿಕೊಂಡು ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸುವುದು ಸಾಧ್ಯ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಈ ಬೇಡಿಕೆಯನ್ನು ಸಹ ಖಂಡಿತ ಈಡೇರಿಸುವುದಾಗಿ ರೈಲ್ವೆ ಸಚಿವರು ಭೇಟಿಯ ವೇಳೆ ತಿಳಿಸಿರುವುದಾಗಿ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಸವದತ್ತಿಗೆ ನೂತನ ರೈಲು ಮಾರ್ಗ ಸಮೀಕ್ಷೆ: ಸಂಸದ ಶೆಟ್ಟರ
