ಬೆಳಗಾವಿ : ಮುಂದೆ ಸಮಯ ಬಂದಾಗ ಶಾಸಕರು ಮತ್ತು ಮಾಜಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ. ಮುಂದೊಂದು ದಿನ ಆ ಸಮಯ ಬರುತ್ತದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗ ಖಾಸಗಿಯಾಗಿ ಪ್ರವಾಸಕ್ಕೆ ಹೋಗಿದ್ದೆ. ಮುಂದೆ ಸಮಯ ಬರುತ್ತದೆ. ಎಲ್ಲರನ್ನೂ ಕರೆದುಕೊಂಡು ಹೋಗುವ ಕಾಲ ಬರುತ್ತದೆ. ಶಾಸಕರು ಹಾಗೂ ಮಾಜಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋಗೋಣ. ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಈ ಸಲದ ಅಧಿವೇಶನಕ್ಕೆ ಯಾವುದೇ ತೊಂದರೆ ಇಲ್ಲ. ಸುಗಮವಾಗಿ ಅಧಿವೇಶನ ನಡೆಯುತ್ತದೆ. ಅಧಿವೇಶನದ ವೇಳೆ ಪ್ರತಿಭಟನೆ ನಡೆಸುವವರಿಗೆ ಬೇಡ ಎನ್ನಲಾಗದು. ಆಯಾ ಇಲಾಖೆ ಸಚಿವರು ಮುಂಚಿತವಾಗಿ ಅವರ ಸಮಸ್ಯೆಯನ್ನು ಸ್ವೀಕರಿಸಿದರೆ ಪ್ರತಿಭಟನೆ ಕಡಿಮೆಯಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಜಾರಿಯಾದ್ದರಿಂದ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆಲ ಇಲಾಖೆಗಳನ್ನು ಪ್ರತ್ಯೇಕಿಸಿ ಕಾರ್ಯ ನಿರ್ವಹಿಸುವ ಅವಶ್ಯಕತೆ ಇಲ್ಲ. ಆದ್ದರಿಂದ ಈ ಇಲಾಖೆಗಳನ್ನು ವಿಲೀನಗೊಳಿಸುವ ಕುರಿತು 10 ವರ್ಷಗಳ ಹಿಂದೆ ವರದಿ ಕೊಟ್ಟಿದ್ದಾರೆ. ಈ ಹಿಂದಿನ ಸರಕಾರಗಳಲ್ಲೂ ವಿಲೀನ ಪ್ರಕ್ರಿಯೆ ನಡೆದಿದೆ. ಗ್ಯಾರಂಟಿ ಯೋಜನೆ ಹಾಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.