ಬೆಳಗಾವಿ,: ನಗರದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಅವರಿಗೆ ಜನ್ಮ ದಿನದ ಅಮೃತಮಹೋತ್ಸವದ ಸವಿ ನೆನಪಿನಲ್ಲಿ ಬೆಳಗಾವಿ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಕೊನೆಯ ದಿನ ದಸರಾ ಗೌರವ ನೀಡಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಎಂದರೆ ಎಲ್ಲರೂ ಆಪ್ತರು. ಯಾರೇ ಕರೆದರೂ ಅಲ್ಲಿ ಹೋಗಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವುದಷ್ಟೆ ಅಲ್ಲದೆ, ಅನೇಕ ಕುಟುಂಬಗಳಿಗೆ ಮಾರ್ಗದರ್ಶನ ಮಾಡುತ್ತ ಅವರಿಗೆ ಸಂಸ್ಕಾರ ಕೊಡುವ ಅಪರೂಪದ ಗುರುಗಳಿಗೆ 75 ವರ್ಷ ತುಂಬುತ್ತಿರುವುದು ನಮಗೆಲ್ಲ ಅತೀವ ಸಂತೋಷ ತಂದಿದೆ. ಅವರ ಅಮೃತ ಮಹೋತ್ಸವವನ್ನು ನವೆಂಬರ್ 11ಕ್ಕೆ ಅದ್ದೂರಿಯಾಗಿ ಬೆಳಗಾವಿ ನಗರದ ಜನ ಮಾಡುತ್ತಿರುವುದು, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ, ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಲ್ಲಿ ನಾವೆಲ್ಲರೂ ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ದಸರಾ ಗೌರವವನ್ನು ಸ್ವೀಕರಿಸಿದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಹಿರೇಮಠದ ದಸರಾ ಎಂದರೆ ಅದು ಈ ಭಾಗಕ್ಕೆ ಮೈಸೂರಿನ ದಸರಾ ನೆನಪಿಸುವಂತಿದೆ. ಇಂದು ಶ್ರೀ ಮಠದಿಂದ ದಸರಾ ಗೌರವ ನೀಡಿರುವುದು ನಮಗೆ ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ 75 ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಖ್ಯಾತ ಸಾಹಿತಿಗಳಾದ ಬಸವರಾಜ ಜಗಜಂಪಿ, ನಿವೃತ್ತ ಪ್ರಾಚಾರ್ಯೆ ಸುಮಂಗಲಾ ಶಿಂಥ್ರಿ ಅವರನ್ನು ಶ್ರೀಮಠದಿಂದ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಬಸವರಾಜ ಜಗಜಂಪಿ ಅವರು ಮಾತನಾಡಿ, ಕಾರಂಜಿಮಠದ ಶ್ರೀಗಳಿಗೂ, ಹುಕ್ಕೇರಿ ಹಿರೇಮಠದ ಶ್ರೀಗಳಿಗೂ ಅವಿನಾಭಾವ ಸಂಬಂಧ ಇದೆ. ಇವತ್ತು ಶ್ರೀಗಳು ಅವರನ್ನು ಗೌರವಿಸಿದ್ದನ್ನು ನೋಡಿದಾಗ ನಿಜಕ್ಕೂ ಆ ಒಂದು ಮುಗ್ದತೆ, ಪ್ರೀತಿ ನಮ್ಮೆಲ್ಲ ಮಂತ್ರಮುಗ್ಧರನ್ನಾಗಿ ಮಾಡಿತ್ತು ಎಂದರು.
ಯುವ ಸಾಹಿತಿ ಪ್ರಕಾಶ ಗಿರಿನಲ್ಲನ್ನವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಟಕೋಳ ಎಂ ಚಂದರಗಿಯ ರೇಣುಕ ಗಡದೇವರ, ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು, ಉದಯ ಶಾಸ್ತ್ರೀಗಳು, ವಿನಯ ಶಾಸ್ತ್ರೀಗಳು, ಗುರು ಶಾಸ್ತ್ರೀಗಳು, ಚಂದ್ರಶೇಖರಯ್ಯ ಸಾಲಿಸವಡಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.