ಬೆಳಗಾವಿ,: ಹೃದಯ ಶಸ್ತ್ರಕ್ರಿಯೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸುವ ವೇಳೆ ಸಂಬಂಧಿಗಳು ನಮ್ಮನ್ನು ಸಾಮಾನ್ಯವಾಗಿ ಇನ್ನು ಮುಂದೆ ರೋಗಿಯ ಆಹಾರ ಕ್ರಮ ಹೇಗಿರಬೇಕೆಂದು ಪ್ರಶ್ನಿಸುತ್ತಾರೆ. ಶಸ್ತ್ರಕ್ರಿಯೆಯ ತರುವಾಯ ಹೃದ್ರೋಗಿಯು ಸಹ ಸಾಮಾನ್ಯರಂತೆ ಜೀವನ ನಡೆಸಬಹುದು. ಹೃದಯ ಆರೋಗ್ಯಕ್ಕೆ ಪೂರಕವಾದ ಆಹಾರಕ್ರಮವನ್ನು ಪಾಲಿಸಬೇಕು. ಡೈಟ್ ನಮ್ಮ ಸಹಜ ಜೀವನಶೈಲಿಯಲ್ಲಿ ಒಂದಾಗಬೇಕೆ ಹೊರತು ಅದಕ್ಕೆ ವಿಶೇಷ ಪ್ರಯತ್ನದ ಅಗತ್ಯ ಬೀಳಕೂಡದು ಎನ್ನುತ್ತಾರೆ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಂಜಿತ ನಾಯಕ.
ಹೃದಯ ಆರೋಗ್ಯಕ್ಕಾಗಿ ಆಹಾರಕ್ಕೆ ಸಂಬಂಧಿಸಿದಂತೆ 10 ಸರಳ ಸೂತ್ರಗಳು.

  1. ಆಹಾರ ಸೇವನೆ ಹಾಗೂ ಕಾರ್ಯಚಟುವಟಿಕೆಯ ನಡುವೆ ಸಮತೋಲನ ಕಾಯ್ದುಕೊಂಡು ತೂಕವನ್ನು ನಿಯಂತ್ರಿಸಿ. ಮನಸ್ಸು ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಯ್ದುಕೊಳ್ಳಿ. ವಾರಕ್ಕೆ ಕನಿಷ್ಠ ಎರಡೂವರೆ ತಾಸಾದರೂ ಶಾರೀರಿಕ ವ್ಯಾಯಾಮ, ಶ್ರಮದಾಯಕ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಪ್ರತಿನಿತ್ಯ 2000ದಿಂದ 2500 ಕ್ಯಾಲೋರಿ ಆಹಾರವನ್ನು ಸೇವಿಸಬೇಕು. ವಯಸ್ಸಾದಂತೆ ಪ್ರತಿ ದಶಕಕ್ಕೆ ಸುಮಾರು 70ರಿಂದ 100 ಕ್ಯಾಲೋರಿಯನ್ನು ಕಡಿತಗೊಳಿಸುತ್ತ ಬರಬೇಕು.
  2. ನೈಸರ್ಗಿಕವಾದ ವೈವಿಧ್ಯಮಯ ತರಕಾರಿ ಹಣ್ಣು ಹಂಪಲಗಳ ಸೇವನೆ. ಆದಷ್ಟು ತಾಜಾ ಹಸಿ ತರಕಾರಿ ಹಣ್ಣುಗಳನ್ನು ಸೇವಿಸಿ, ಅವುಗಳ ಜ್ಯೂಸ್ ಅಥವಾ ಇನ್ನಿತರೆ ಪ್ಯಾಕೇಜ್ಡ್ ಡ್ರಿಂಕ ಅಥವಾ ಉತ್ಪನ್ನಗಳನ್ನಲ್ಲ. ಸ್ಥಳೀಯ ಹಾಗೂ ಋತುವಿಗೆ ಅನುಗುಣವಾಗಿ ಬೆಳೆಯಲ್ಪಟ್ಟ ತರಕಾರಿ ಹಣ್ಣುಗಳಿಗೆ ಆದ್ಯತೆ ನೀಡುವುದನ್ನು ರೂಢಿಸಿಕೊಳ್ಳಬೇಕು. ಮೆಡಿಟೇರಿಯನ್ ಭಾಗದ ತರಕಾರಿ ಅಥವಾ ಆಸ್ಟ್ರೇಲಿಯಾ, ನ್ಯೂಜಿಲೆಂಡಿನ ಸೇಬು, ಕಿವಿ ಹಣ್ಣಿಗಿಂತ ಸ್ಥಳೀಯ ತಾಜಾ ಹಣ್ಣು ತರಕಾರಿ ಸೇವನೆಯ ಲಾಭ ಅಧಿಕವಾದದ್ದು. ಆಹಾರದ ಸಂರಕ್ಷಣೆಯ ಮೇಲೆ ಅನೇಕ ರಾಸಾಯನಿಕ ಬಳಕೆಯ ಅಪಾಯವಿರುತ್ತದೆ ಹಾಗೂ ಅವು ತಾಜಾತನವನ್ನು ಹೊಂದಿರುವುದು ಅಸಾಧ್ಯ.
  3. ಆಹಾರಧಾನ್ಯಗಳನ್ನು ಸಂಸ್ಕರಿಸದೆ ಬಳಸಿ. ಕಡಿಮೆ ಸಂಸ್ಕರಿಸಲ್ಪಟ್ಟ ಆಹಾರವೇ ಉತ್ತಮ. ಆಹಾರ ಧಾನ್ಯಗಳನ್ನು ಆದಷ್ಟು ಸಂಪೂರ್ಣ ನೈಸರ್ಗಿಕವಾಗಿ ಸಂಸ್ಕರಿದೇ ಬಳಸಲು ಪ್ರಯತ್ನಿಸಿ. ಆಹಾರಧಾನ್ಯಗಳನ್ನು ಸಂಪೂರ್ಣವಾಗಿ ಸೇವಿಸುವುದರಿಂದ ಅವುಗಳಲ್ಲಿನ ನಾರಿನಂಶ ಮಲಬದ್ಧತೆಯಂತಹ ಸಮಸ್ಯೆಗಳಿಗೂ ಸಹ ಕಡಿವಾಣ ಹಾಕುತ್ತದೆ.
  4. ಸಸಾರಜನಕ(ಪೋಷಕಾಂಶ) ಗಳನ್ನು ನೈಸರ್ಗಿಕ ಆರೋಗ್ಯಕರ ಆಹಾರ ಮೂಲದಿಂದ ಪಡೆಯಲೆತ್ನಿಸಿ. ಸೋಯಾ, ಚೆನ್ನಾಗಿ, ಕಡಲೆ, ಹೊಡೆದ ಬಟಾಣಿ ಹೀಗೆ ಅನೇಕ ಸಸ್ಯ ಮೂಲಗಳಿಂದ ಪಡೆಯುವುದು ಉತ್ತಮ. ವಾರದಲ್ಲಿ ಎರಡು ಮೂರು ಬಾರಿ ಮೀನಿನ ಊಟಕ್ಕೆ ಅಡ್ಡಿಲ್ಲ ಆದರೆ ಮೀನನ್ನು ಫ್ರೈ ಮಾಡಿ ತಿನ್ನುವುದು ಸೂಕ್ತವಲ್ಲ. ಮಾಂಸಾಹಾರವನ್ನು ವರ್ಜಿಸಬೇಕು. ಕೋಳಿಮಾಂಸವನ್ನು ನಿಯಮಿತವಾಗಿ ಸೇವಿಸಬಹುದು ಆದರೆ ಸಂಸ್ಕರಿಸಿದ ಮಾಂಸದಿಂದ ದೂರವಿರಿ. ಕೆನೆರಹಿತ ಅಥವಾ ಕಡಿಮೆ ಕೊಬ್ಬಿನಂಶವಿರುವ ಹಾಲು ಹಾಗೂ ಅದರ ಉತ್ಪನ್ನಗಳ ಬಳಕೆಗೆ ಅಡ್ಡಿಯಿಲ್ಲ. ದಿನಕ್ಕೊಂದು ಮೊಟ್ಟೆ ಸೇವಿಸಿ, ಕೊಲೆಸ್ಟ್ರಾಲ್ ಕೊಬ್ಬಿನಂಶ ಹೆಚ್ಚಿರುವವರು ಮೊಟ್ಟೆಯ ಹಳದಿ ಭಾಗವನ್ನು ಬಿಡಬೇಕು.
  5. ಅಡುಗೆಗೆ ಸಸ್ಯಾಧಾರಿತ ತೈಲ ಬಳಕೆ ತೈಲ ಬಳಕೆ. ಸನ್ ಫ್ಲವರ್ ಸೂರ್ಯಕಾಂತಿ ಶೇಂಗಾ ಇತ್ಯಾದಿ ಎಣ್ಣೆ ಬಳಸಬಹುದು.
  6. ಅಧಿಕ ಪ್ರಮಾಣದಲ್ಲಿ ಸಂಸ್ಕರಿಸಿದ ಆಹಾರದ ಬದಲಾಗಿ ಅತಿ ಕಡಿಮೆ ಸಂಸ್ಕರಿಸಿದ ಆಹಾರ ಸೇವನೆಗೆ ಆದ್ಯತೆ ನೀಡಿ. ಆಹಾರ ಸಂಸ್ಕರಣೆಯಲ್ಲಿ ಅಧಿಕ ಉಪ್ಪು ಸಕ್ಕರೆಯಂತಹ ರಾಸಾಯನಿಕಗಳ ಬಳಕೆಯಾಗಿರುತ್ತದೆ. ಇದರಿಂದ ಹೃದಯಕ್ಕೆ ಹಾನಿಕರವಾಗಬಲ್ಲ ಕೃತಕ ಬಣ್ಣದ ಬಳಕೆಗೆ ಸಾಧ್ಯವಾದಷ್ಟು ಕಡಿವಾಣ ಹಾಕಿ.
  7. ಸಕ್ಕರೆ ಭರಿತ ತಂಪು ಪಾನೀಯ ಅಥವಾ ಆಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಿ. ದಾರಿತಪ್ಪಿಸುವ ತಂಪುಪಾನೀಯಗಳ ಜಾಹೀರಾತುಗಳಿಗೆ ಮರುಳಾಗದಿರಿ ಸಂಸ್ಕರಿತ ಪದಗಳೆಲ್ಲವೂ ಹಾನಿಕಾರಕವೆಂದು ಪರಿಗಣಿಸುವುದು ಒಳಿತು.
  8. ಉಪ್ಪಿಲ್ಲದ ಆಹಾರ ತಯಾರಿಕೆಗೆ ಒತ್ತು ನೀಡಿ. ಉಪ್ಪು ಅಧಿಕವಾಗಿ ಬಳಕೆಯಾಗುವ ಉಪ್ಪಿನಕಾಯಿ ಹಪ್ಪಳ ಇತ್ಯಾದಿ ಆಹಾರವನ್ನು ಕಡಿಮೆ ಮಾಡಿ. ಪ್ಯಾಕೆಟ್ ಆಹಾರಗಳಲ್ಲಿ ಉಪ್ಪಿನಂಶ ಅಧಿಕವಾಗಿರುವುದರಿಂದ ಅದನ್ನು ಬಳಸಬೇಡಿ ಎಲ್ಲಾ ಆಹಾರ ಸೇರಿ ದಿನದಲ್ಲಿ ಕೇವಲ ಒಂದೆರಡು ಚಿಟಿಕೆ ಉಪ್ಪು ಮಾತ್ರ ಬಳಸಿ.
  9. ಮದ್ಯಪಾನದಿಂದ ದೂರವಿರಿ ಮದ್ಯ ಸೇವನೆಯ ಚಟ ವಿದ್ದಲ್ಲಿ ಅದನ್ನು ಸಂಪೂರ್ಣ ನಿಯಂತ್ರಿಸಲು ಪ್ರಯತ್ನಿಸಿ.
  10. ದಿನಕ್ಕೆ ಎರಡರಿಂದ 2.5 ಲೀಟರ್ ನೀರು ಕುಡಿಯಿರಿ ಹೃದಯದ ಕಾರ್ಯಕ್ಷಮತೆ ಕಡಿಮೆಯಿದ್ದಲ್ಲಿ ಅಥವಾ ಹೃದಯ ವೈಫಲ್ಯ ಇರುವವರು ನೀರಿನಂಶವನ್ನು ಎರಡು ಲೀಟರಿಗೆ ಸೀಮಿತಗೊಳಿಸಬೇಕು, ಅದು ವೈದ್ಯರ ಸಲಹೆ ಮೇರೆಗೆ ಮಾತ್ರ.
    ಆಹಾರವನ್ನು ಹಿತಮಿತವಾಗಿ ಸೇವಿಸಿ ನೈಸರ್ಗಿಕ ಆಹಾರಗಳಿಗೆ ಅವುಗಳ ಮೂಲ ರೂಪದಲ್ಲಿ ಸೇವಿಸಲು ಪ್ರಯತ್ನಿಸಿ ಆರೋಗ್ಯವಂತ ಹೃದಯ ಬದುಕು ನಿಮ್ಮದಾಗಲಿ. ಬಸವರಾಜ ಸೊಂಟನವರ