ಬೆಳಗಾವಿ : ನಗರದಲ್ಲಿರುವ ಕಾರ್ಮಿಕ ವಿಮಾ ಆಸ್ಪತ್ರೆಯ ಕಟ್ಟಡವು ಶೀತಿಲಾವಸ್ಥೆಯಲ್ಲಿದ್ದು, ಈಗಾಗಲೇ ಒಳರೋಗಿ ವಿಭಾಗವನ್ನು ಬಂದ ಮಾಡಿ ಕೇವಲ ಹೊರರೋಗಿ ವಿಭಾಗವು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕೇವಲ ಬೇರೆ ಆಸ್ಪತ್ರೆಗಳಿಗೆ ರೆಫೆರ ಬಿಟ್ಟರೆ ಅಲ್ಲಿ ಯಾವುದೇ ರೀತಿಯ ವೈದ್ಯಕೀಯ ಸೇವೆ ಲಭಿಸುತ್ತಿಲ್ಲ. ಆದ್ದರಿಂದ ಆಸ್ಪತ್ರೆಯನ್ನು ಹೊಸದಾಗಿ ನಿರ್ಮಿಸುವವರೆಗೆ ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮೇಲಿಂದ ಮೇಲೆ ಉದ್ಯಮಿಗಳು ಒತ್ತಾಯಿಸುತ್ತಲೇ ಬಂದಿದ್ದಾರೆ.
ಅದರಂತೆ ಈ ಹಿಂದೆ ಅಕ್ಟೋಬರ 1 ರಿಂದ ಶಿವಬಸವ ನಗರದ ಆಸ್ಪತ್ರೆಯೊಂದರಲ್ಲಿ ಕಾರ್ಯಾರಂಭ ಮಾಡುವದಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ (BDSSIA) ಮತ್ತು ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (BCCI) ಸದಸ್ಯರು ಇಎಸೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಕಳಸನ್ನವರ ಅವರನ್ನು ಭೇಟಿಯಾಗಿ ಆಸ್ಪತ್ರೆಯನ್ನು ಶೀಘ್ರವೇ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಆಸ್ಪತ್ರೆ ಕಟ್ಟಡವು ಸುರಕ್ಷಿತವಲ್ಲವೆಂದು ಪರಿಗಣಿಸಲಾಗಿದ್ದು, ಸೌಲಭ್ಯಗಳ ಕೊರತೆಯಿಂದ ರೋಗಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಹಲವು ಸಮಸ್ಯೆಯುಂಟಾಗುತ್ತಿದೆ.
ವೈದ್ಯರು, ವಿಮಾ ಕಾರ್ಮಿಕರಿಗೆ ಒಳರೋಗಿ ಮತ್ತು ಹೊರರೋಗಿಗಳಿಗೆ ಗಂಭೀರ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಕೈಗಾರಿಕೋದ್ಯಮಿಗಳು ವಿವರಿಸಿದ್ದಾರೆ.
ಶೀತಿಲಾವಸ್ಥೆಯಲ್ಲಿರುವ ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿಯಬಹುದು ಎಂದು ಎಚ್ಚರಿಸಿ, ಸರ್ಕಾರವು ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಆಸ್ಪತ್ರೆಯನ್ನು ಸುಸಜ್ಜಿತ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಇದು ನಗರದ ಕೈಗಾರಿಕಾ ಕಾರ್ಮಿಕರಿಗೆ ಹೆಚ್ಚು ಅಗತ್ಯವಿರುವ ಅನುಕೂಲಕರ ಸೇವೆಯನ್ನು ನೀಡುತ್ತದೆ ಎಂದು ಹೇಳಿದರು.
ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ಶೀಘ್ರವೇ ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ನಾವು ಅನೇಕ ಸ್ಥಳಗಳನ್ನು ಪರಿಶೀಲಿಸಿದ್ದೇವೆ ಎಂದು ಭರವಸೆ ನೀಡಿದ್ದಾರೆ.