ಬೆಳಗಾವಿ: ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 66 ಶಾಸಕರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆಯೇ ಗೆದ್ದಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದು ಹೊಂದಾಣಿಕೆ ಮಾಡಿಕೊಳ್ಳುವವರ ಕಾಲ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೊಂದಾಣಿಕೆಯಿಂದಲೇ ಅವರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನೂ ಗೆಲ್ಲಿಸಬಹುದು. ಹಾಗಾಗಿ ಅವರನ್ನು ನೇಮಕ ಮಾಡಲಾಗಿದೆ ಎಂದರು.

ಕಾಂತರಾಜ್ ವರದಿ ಜಾರಿಯಾಗಲಿ: ಕಾಂತರಾಜ್‌ ಆಯೋಗದ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂತರಾಜ್‌ ಆಯೋಗದ ವರದಿಯ ಮೂಲಪ್ರತಿ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಆ ವರದಿ ಸಾಫ್ಟ್‌ಕಾಪಿ ಕಂಪ್ಯೂಟರ್‌ನಲ್ಲಿ ಇರುತ್ತದೆ. ಅದನ್ನು ಕಳ್ಳತನ ‌ಮಾಡಲು ಆಗುವುದಿಲ್ಲವಲ್ಲ. ಈ ವರದಿ ಜಾರಿಯಾಗಬಾರದು ಎಂದು ಹೇಳುವ ಸಮಾಜಗಳು ಸ್ವಲ್ಪ ಸಾಮಾಜಿಕವಾಗಿ ಯೋಚಿಸಬೇಕೆಂದು ಹೇಳಿದರು.

‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಕಾಂತರಾಜ್‌ ಆಯೋಗದಿಂದ ವರದಿ ಪಡೆದಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ವರದಿ ವಿರೋಧಿಸಿ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ, ಈ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿ. ಸದನದೊಳಗೆ ಈ ವಿಷಯ ಚರ್ಚೆಗೆ ತರಲಿ’ ಎಂದು ಆಗ್ರಹಿಸಿದರು.