ಬೆಳಗಾವಿ: ‘ಬೈಲಹೊಂಗಲದ ಮಹಾಂತ ಕ್ರಿಯೇಷನ್ಸ್‌ ಬ್ಯಾನರ್‌ನಡಿ ನಿರ್ಮಿಸಿದ ‘ಸ್ಕೂಲ್‌ ಡೇಸ್‌’ ಚಿತ್ರ ನ.24ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ತೆರೆಕಾಣಲಿದೆ’ ಎಂದು ನಿರ್ದೇಶಕ ಎಚ್‌.ಸಂಜಯ ಹೇಳಿದರು.

ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ನಿರ್ಮಾಣವಾದ ಸಿನಿಮಾ ಈ ಭಾಗದಲ್ಲೇ ಚಿತ್ರೀಕರಣವಾಗಿದೆ. ಮಕ್ಕಳ ತುಂಟಾಟ, ಗೆಳೆಯರೊಂದಿಗಿನ ಒಡನಾಟ, ಪ್ರೀತಿ–ಪ್ರೇಮ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗಿನ ಚೇಷ್ಟೆ ಹೀಗೆ… ಶಾಲಾ ದಿನಗಳನ್ನು ಮೆಲುಕು ಹಾಕುವ ಕಥಾಹಂದರ ಒಳಗೊಂಡಿದೆ. ಇದು ಹಾಸ್ಯಭರಿತ ಚಿತ್ರವಾಗಿದ್ದು, ಎಸ್‌.ಎಂ.ಸಂದೀಪ, ಪ್ರಿಯಾ ಸವಡಿ, ಅನಿಕೇತಗೌಡ, ಸಂಗಮ್‌ ಮಠದ ಮತ್ತಿತರರು ತಾರಾಗಣದಲ್ಲಿದ್ದಾರೆ. ಮೂರು ಹಾಡುಗಳಿವೆ. ಕೊನೆಗೇ ಸಾಮಾಜಿಕ ಸಂದೇಶವನ್ನೂ ಚಿತ್ರ ಕೊಡಲಿದೆ’ ಎಂದರು.

ನಿರ್ಮಾಪಕ ಉಮೇಶ ಹಿರೇಮಠ, ‘ನ.24ರಂದು ರಾಜ್ಯದ 50 ಚಿತ್ರಮಂದಿರಗಳಲ್ಲಿ ಇದು ಬಿಡುಗಡೆಯಾಗಲಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುತ್ತದೆ ಎಂಬ ವಿಶ್ವಾಸವಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಉತ್ತರ ಕರ್ನಾಟಕದ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಕೋರಿದರು.