ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಶಾಶ್ವತ ಕಿವುಡತನ ಹೋಗಲಾಡಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತರ ಕರ್ನಾಟಕದಲ್ಲಿಯೇ ಪ್ರಥಮವಾಗಿ ಕಾಕ್ಲೀಯರ ಇಂಪ್ಲ್ಯಾಂಟ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಆಸ್ಪತ್ರೆ. ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾಕ್ಲಿಯರ ಇಂಪ್ಲ್ಯಾಂಟ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುತ್ತಿದೆ. 2022ರಲ್ಲಿ ಉಚಿತ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಗಿದ್ದು ಇಲ್ಲಿಯವರೆಗೆ 16 ಮಕ್ಕಳಿಗೆ ಕಾಕ್ಲಿಯರ ಇಂಪ್ಲ್ಯಾಂಟ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಮಕ್ಕಳಿಗೆ ಹೊಸ ಬದುಕು ನೀಡಲಾಗಿದೆ.

ಈ ವಿಷಯವನ್ನು ಪತ್ರಿಕಾಗೋಷ್ಟಿಯಲ್ಲಿಂದು ತಿಳಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು, ವಯಸ್ಕರಿಗೂ ಕೂಡ ಇದನ್ನು ಅಳವಡಿಸಬಹುದು.ಇದು ನಿತ್ಯ ನಿರಂತರವಾಗಿ ಮುಂದುವರೆಯಲಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು 6 ತಿಂಗಳಿನಿಂದ 1 ವರ್ಷದವರೆಗೆ ಅವರಿಗೆ ಸ್ಪೀಚ್ ಥೆರಪಿ ನೀಡಿ ಅವರಿಗೆ ಕಿವಿ ಕೇಳಿಸುವದರೊಂದಿಗೆ ಮಾತನಾಡಲು ಕೂಡ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
10 ತಿಂಗಳ ಮಗು ಕೂಡ ಕಾಕ್ಲಿಯರ್ ಇಂಪ್ಲ್ಯಾಂಟ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಕಿವುಡುತನ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ರಾಷ್ಟ್ರೀಯ ಕಾರ್ಯಕ್ರಮದ ಜೊತೆಗೆ ಉಚಿತ ಕಾಕ್ಲಿಯರ್ ಇಂಪ್ಲ್ಯಾಂಟ ಯೋಜನೆಯನ್ನು ಪ್ರಾರಂಭಿಸಿದ್ದು, ಯೋಜನೆಯಡಿ 6 ವರ್ಷದೊಳಗಿನ ಮಕ್ಕಳು ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದರು.
ಕಾಕ್ಲಿಯರ ಇಂಪ್ಲ್ಯಾಂಟ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ. ಪ್ರೀತಿ ಹಜಾರೆ ಅವರು ಮಾತನಾಡಿ,ಶ್ರವಣ ದೋಷ ಅಥವಾ ಕಿವುಡುತನವು ಒಂದು ಧ್ವನಿಪೆಟ್ಟಿಗೆಯನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದ್ದು, ವಿಶ್ವದಾದ್ಯಂತ 466 ಮಿಲಿಯನ್ ಕಿವುಡತನ ಹಾಗೂ ಮೂಕ ಮಕ್ಕಳಿದ್ದರೆ, ಭಾರತದಲ್ಲಿ ಸುಮಾರು 63 ಮಿಲಿಯನ್‌ಗೂ ಅಧಿಕ ಮಕ್ಕಳು ಶಬ್ದ ಆಲಿಸುವ ಮತ್ತು ಮಾತನಾಡುವದರಿಂದ ವಂಚಿತಗೊಂಡಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 5ರಲ್ಲಿ ಒಂದು ಮಗು ಇದರಿಂದ ಬಳಲುತ್ತಿರುವದು ಕಂಡು ಬರುತ್ತಿದೆ. ಹುಟ್ಟಿದ ಮಗು ಎರಡು ವರ್ಷದಲ್ಲಿ ರೋಗ ಪತ್ತೆ ಮಾಡದಿದ್ದರೆ, 5 ವರ್ಷದವರೆಗೆ ಗಮನಕ್ಕೆ ಬರುವುದಿಲ್ಲ. ಭಾರತದಲ್ಲಿ ಪ್ರತಿದಿನ 67,000 ಶಿಶುಗಳು ಜನಿಸುತ್ತವೆ. ಅದರಲ್ಲಿ ಪ್ರತಿ ಸಾವಿರಕ್ಕೆ 4 ಮಕ್ಕಳು ತೀವ್ರವಾದ ಶ್ರವಣ ದೋಷವನ್ನು ಹೊಂದಿರುವದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಜನ್ಮತಃ,(ಜೆನೆಟಿಕ್/ಜೆನೆಟಿಕ್ ಅಲ್ಲದ), ತಾಯಿಯ ಸೋಂಕುಗಳು ಅಥವಾ ಇನ್ನೀತರ ಕಾರಣಗಳಾಗಿರಬಹುದು. ಅದರಲ್ಲಿಯೂ ಮುಖ್ಯವಾಗಿ ರಕ್ತಸಂಬಂಧಿಗಳಲ್ಲಿನ ವಿವಾಹವಾಗುವ ದಂಪತಿಗಳ ಮಗು ಶ್ರವಣದೋಷದಿಂದ ಬಳಲುತ್ತಿರುವದು ಸಾಮಾನ್ಯವಾಗಿ ಕಂಡುಬರುತ್ತದೆ.
ಮಗುವಿಗೆ ಉತ್ತಮ ಮಾತು ಮತ್ತು ಭಾಷೆಯನ್ನು ಅಭಿವೃದ್ಧಿಪಡಿಸಲು, ಶ್ರವಣೇಂದ್ರಿಯ ಪ್ರಚೋದನೆಯೊಂದಿಗೆ ಕೇಳುವ ಗ್ರಹಿಕೆ ಬಹಳ ಮುಖ್ಯ. ಮೆದುಳಿನ ಬೆಳವಣಿಗೆಯು ಹೆಚ್ಚಾದ ಮೊದಲ ಎರಡು ವರ್ಷಗಳಲ್ಲಿ ಶ್ರವಣೇಂದ್ರಿಯ ಸಂಪರ್ಕಗಳು ರೂಪುಗೊಳ್ಳುತ್ತವೆ. ನಂತರ ಕಡಿಮೆಯಾಗುತ್ತ ಅಂತಿಮವಾಗಿ ಆರು ವರ್ಷಗಳ ನಂತರ ಬಹಳ ಕಡಿಮೆ ಆಗುತ್ತದೆ. ಈ ಅವಧಿಯಲ್ಲಿ ಶ್ರವಣೇಂದ್ರಿಯ ಅಥವಾ ಧ್ವನಿ ಪ್ರಚೋದಕಗಳ ಕೊರತೆಯು ಶ್ರವಣೇಂದ್ರಿಯ ಹಾದಿಗಳಲ್ಲಿ ಕೊರತೆಯನ್ನು ಉಂಟುಮಾಡುತ್ತದೆ. ಆಗ ಮಗುವಿನ ಶ್ರವಣ ದೋಷವು ಕಂಡುಬರುತ್ತದೆ. ಇದರಿಂದ ಮಾತು ಮತ್ತು ಭಾಷೆಯ ಬೆಳವಣಿಗೆಯಲ್ಲಿ ನ್ಯೂನ್ಯತೆ ಕಂಡುಬರುತ್ತದೆ. ಆಳವಾದ ಶ್ರವಣದೋಷ ಹೊಂದಿರುವ ಮಕ್ಕಳಿಗೆ ಶ್ರವಣ ಸಾಧನಗಳನ್ನು ಅಳವಡಿಸಿದರೂ ಕೂಡ ಮಾತನ್ನು ಗ್ರಹಿಸದೇ, ಮಾತನಾಡದೇ ಇದ್ದಾಗ ಅದರ ಬಳಕೆ ಪ್ರಯೋಜನಕ್ಕೆ ಬರುವುದಿಲ್ಲ. ಆಗ ಕಾಕ್ಲಿಯರ್ ಇಂಪ್ಲಾAಟ್ ಶಸ್ತ್ರಚಿಕಿತ್ಸೆ ಮಾತ್ರ ಶಾಶ್ವತ ಪರಿಹಾರವನ್ನು ಕಲ್ಪಿಸುತ್ತದೆ.
ಕಾಕ್ಲಿಯರ್ ಇಂಪ್ಲ್ಯಾಂಟ ಒಂದು ಶ್ರವಣೇಂದ್ರಿಯ ಸಾಧನವಾಗಿದ್ದು, ಸಾಧನದ ಹೊರಭಾಗವನ್ನು ಕಿವಿಯ ಹಿಂದೆ ತಲೆಬುರುಡೆಯ ಮೂಳೆಯ ಮೇಲೆ ಬಾಹ್ಯವಾಗಿ ಇರಿಸಲಾಗುತ್ತದೆ ಮತ್ತು ಶ್ರವಣೇಂದ್ರಿಯ ನರಗಳ ಜೀವ ಪ್ರಚೋದನೆಗಾಗಿ ಒಳಗಿನ ಕಿವಿಯೊಳಗೆ (ಕೋಕ್ಲಿಯಾ) ಎಲೆಕ್ಟ್ರೋಡ್ ರಚನೆಯೊಂದಿಗೆ ಒಳಭಾಗವನ್ನು ಶಸ್ತ್ರಚಿಕಿತ್ಸೆಯಿಂದ ಸೇರಿಸಲಾಗುತ್ತದೆ. ಮಗುವಿನ ಮೆದುಳಿನ ಬೆಳವಣಿಗೆಯು 5 ರಿಂದ 7 ವರ್ಷಗಳವರೆಗೆ ಗರಿಷ್ಠವಾಗಿರುವ ಕಾರಣ ಚಿಕ್ಕ ವಯಸ್ಸಿನಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿದರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಕ್ಕಳ ಕಿವುಡುತನ ಪ್ರಾರಂಭವಾದ ನಂತರ ಪತ್ತೆಹಚ್ಚಿದರೆ ಮತ್ತು ನಂತರ ತ್ವರಿತವಾಗಿ ಅಳವಡಿಸುವಿಕೆಯನ್ನು ನಿರ್ವಹಿಸಿದರೆ ಮಕ್ಕಳು ಸಾಮಾನ್ಯ ಮಾತು ಮತ್ತು ಭಾಷೆಯ ಬೆಳವಣಿಗೆಯಲ್ಲಿ ಪ್ರಗತಿ ಕಾಣಬಹುದು.

ಪತ್ರಿಕಾಗೋಷ್ಠಿಯಲ್ಲಿ ಇಎನ್ ಟಿ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಂದ್ರ ಮೆಟಗುಡಮಠ, ಆಡಳಿತಾಧಿಕಾರಿ ಡಾ. ರಾಜಶೇಖರ ಸೋಮನಟ್ಟಿ ಉಪಸ್ಥಿತರಿದ್ದರು.