ಚಿಕ್ಕೋಡಿ : ಶುಕ್ರವಾರ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿ ಅವರನ್ನು ಘೋರವಾಗಿ ಹತ್ಯೆಗೈದ ಘಟನೆ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದ್ದು, ಮೃತದೇಹವನ್ನು9 ಭಾಗಗಳನ್ನಾಗಿ ತುಂಡು ತುಂಡಾಗಿ ಕತ್ತರಿಸಿ ಕೊಳವೆ ಬಾವಿಯಲ್ಲಿ ಹಾಕಲಾಗಿದೆ.

ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿ ಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜ್ ಹತ್ಯೆಯಾದ ಮುನಿ. ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ಜೈನ‌ ಮುನಿ ಕೊಲೆ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ.

ಜೈನಮುನಿ ಮಹಾರಾಜರ ಮೃತದೇಹದ 9 ಭಾಗಗಳನ್ನ ಕೊಳವೆ ಬಾವಿಯಿಂದ ಹೊರತೆಗೆದ್ದಿದ್ದಾರೆ.  ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆ ಪ್ರತ್ಯೇಕವಾಗಿ ಕತ್ತರಿಸಿರುವ ಕ್ರೂರಿಗಳು ಕಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆಬಾವಿಗೆ ಎಸೆದಿದ್ದರು. ಕೊಳವೆಬಾವಿಯ 25ನೇ ಅಡಿ ಆಳಕ್ಕೆ ರಕ್ತಸಿಕ್ತ ಸೀರೆ, ಟವೆಲ್ ಪತ್ತೆಯಾದರೆ, 30ಅಡಿ ಆಳದಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂದೀಪ ಪಾಟೀಲ ಅವರು ತಿಳಿಸಿದ್ದಾರೆ. ಗ್ರಾಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಅಧಿಕಾರಿಗಳ ಸಮೇತ ಪೊಲೀಸರು ಬೀಡುಬಿಟ್ಟಿದ್ದು ತೀವ್ರ ನಿಗಾ ವಹಿಸಲಾಗಿದೆ.