ಬೆಳಗಾವಿ: ಯುವಕ–ಯುವತಿಯರು ಯಾವುದೇ ಸಮುದಾಯವನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸಿ, ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ವಿದ್ಯಾರ್ಥಿಗಳೇ ನಮ್ಮ ದೇಶದ ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯ ನಿಜವಾದ ರಾಯಭಾರಿಗಳು’ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎರಡು ದಿನ ನಡೆಯಲಿರುವ ‘ಯುಕ್ತಿ–2024’ ರಾಷ್ಟ್ರಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಶಕ್ತಿಗೆ ನಾವು ಹೇಗೆ ಮಾರ್ಗದರ್ಶನ ನೀಡುತ್ತೇವೆ ಮತ್ತು ಅವರನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ ಹೆಚ್ಚಿನ ಯುವಸಮೂಹ ಹೊಂದಿರುವುದು ನಮ್ಮ ದೇಶದ ಶಕ್ತಿ. ಎಂದು ಹೇಳಿದರು.
‘ತಂತ್ರಜ್ಞಾನ, ಸಾಂಸ್ಕೃತಿಕ ಮತ್ತು ಕಲಾತ್ಮಕ ಚಟುವಟಿಕೆಯಲ್ಲಿ ಯುವ ಮನಸ್ಸುಗಳನ್ನು ತೊಡಗಿಸಿ, ಅವರಲ್ಲಿನ ಪ್ರತಿಭೆ ಅನಾರವಣಕ್ಕೆ ಈ ಉತ್ಸವ ವೇದಿಕೆ ಕಲ್ಪಿಸಿದೆ’ ಎಂದರು.
ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ, ಪ್ರಾದೇಶಿಕ ನಿರ್ದೇಶಕ ಪ್ರೊ.ಎಸ್.ಬಿ.ದಂಡಗಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ ಪ್ರಲ್ಹಾದ್ ರಾಠೋಡ, ಸಂಯೋಜಕಿ ಪ್ರೊ.ದೀಪ್ತಿ ಶೆಟ್ಟಿ ಇದ್ದರು. ಮೊದಲ ದಿನ ನೃತ್ಯ, ಗಾಯನ, ಪ್ರಬಂಧ ಮಂಡನೆ, ಬ್ಯಾಟಲ್ ಆಫ್ ಬ್ಯಾಂಡ್ಸ್, ರಂಗೋಲಿ ಸ್ಪರ್ಧೆ ನಡೆದವು. ವಿವಿಧ ರಾಜ್ಯಗಳ 2,500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.