ಬೆಳಗಾವಿ: ‘ಸರ್ಕಾರದ ಮಾರ್ಗ ಸೂಚಿಯಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 100 ಪೌರಕಾರ್ಮಿಕರ ನೇಮಕಾತಿಗೆ ಅಧಿಸೂಚನೆ ಹೊರಡಿ ಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಮ್ಯಾನ್ಯುವಲ್ ಸ್ಕ್ಯಾವೆಂಜರ್ ನಿಷೇಧ, ಪುನರ್ವಸತಿ ಕಾಯ್ದೆ 2003ರ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ವೇಳೆ ಮಾತನಾಡಿದ ವಿಜಯ ನರಗಟ್ಟಿ, ‘ಜಿಲ್ಲೆಯಲ್ಲಿ 368 ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಆದೇಶ ಪತ್ರ ವಿತರಣೆ ಮಾಡಿರುವುದು ಸಂತಸದ ವಿಷಯ. ಅದೇ ರೀತಿಯಲ್ಲಿ ಈಗಾಗಲೇ ಪೌರಕಾರ್ಮಿಕರು ವಾಸವಿರುವ 353 ವಸತಿ ಗೃಹಗಳ ಹಕ್ಕುಪತ್ರ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘353 ವಸತಿ ಗೃಹಗಳಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಿಂದ ಸಮೀಕ್ಷೆ ಕೈಗೊಂಡು, ಅರ್ಹರ ಪಟ್ಟಿ ಸಲ್ಲಿಸಿದಲ್ಲಿ 24 ಗಂಟೆಗಳಲ್ಲಿ ಹಕ್ಕುಪತ್ರ ವಿತರಿಸಲು ಜಿಲ್ಲಾಡಳಿತದಿಂದ ಆದೇಶ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 383 ಮ್ಯಾನ್ಯುವಲ್ ಸ್ಕ್ಯಾವೆಂಜರ್ ಅವರನ್ನು ಗುರುತಿಸಲಾಗಿದ್ದು, ಅಂಥವರಿಗೆ ಗುರುತಿನ ಚೀಟಿ ನೀಡಲು ಅನುಮತಿ ಕೋರಿ ಈಗಾಗಲೇ ಸರ್ಕಾರಕ್ಕೆ ಪತ್ರ ಕಳಿಸಲಾಗಿದೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಮಲ್ಲಿಕಾರ್ಜುನ ಕಲಾದಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.