ಬೆಳಗಾವಿ,: ದೇಶದ ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ನೀಟನಲ್ಲಿ ಉತ್ತೀರ್ಣಗೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಸುಲಭವಾಗಿ ಎಂಬಿಬಿಎಸ್ ಸೀಟು ಸೀಗುವದು ಅಷ್ಟೊಂದು ಸುಲಭವಲ್ಲ. ಸಕ್ತ ಸಾಲಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯ ಪರೀಕ್ಷೆ ಬರೆದ 22.09 ಲಕ್ಷ ವಿದ್ಯಾರ್ಥಿಗಳಲ್ಲಿ 12.36 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ 13.15 ಲಕ್ಷ ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸಿದ್ದರು. ಆದರೆ ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ 79 ಸಾವಿರ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ದ ಪ್ರಕಾರ 2025-26ನೇ ಸಾಲಿಗೆ ದೇಶದ ಸರಕಾರಿ ಮತ್ತು ಖಾಸಗಿಯ ಒಟ್ಟು 780 ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಒಟ್ಟು 1,18,190 ಎಂಬಿಬಿಎಸ್ ಸೀಟುಗಳು ಲಭ್ಯ ಇವೆ. ಇದರಲ್ಲಿ ಏಮ್ಸ್ ಕೂಡ ಸೇರಿದೆ. ಆದರೆ ಸುಮಾರು 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೀಟು ಲಭಿಸುವುದಿಲ್ಲ.
ಎಂಬಿಬಿಎಸ್ ಅತೀ ಹೆಚ್ಚು ಸೀಟುಗಳನ್ನು ಹೊಂದಿರುವ ಟಾಪ 5 ರಾಜ್ಯಗಳು: ತಮಿಳುನಾಡು: 11,725, ಉತ್ತರ ಪ್ರದೇಶ: 11,225, ಕರ್ನಾಟಕ: 11,045, ಮಹಾರಾಷ್ಟ್ರ: 10,595, ತೆಲಂಗಾಣ: 8,540, ಈ ಐದು ರಾಜ್ಯಗಳು ಒಟ್ಟು 53,000 ಕ್ಕೂ ಹೆಚ್ಚು ಸೀಟುಗಳನ್ನು ಹೊಂದಿದ್ದು, ರಾಷ್ಟ್ರೀಯ ಒಟ್ಟು ಸೀಟುಗಳಲ್ಲಿ ಸುಮಾರು ಶೇ. 45 ರಷ್ಟು ಆಗಿದೆ. ಆದರೆ ಕೆಲವು ರಾಜ್ಯಗಳು ವೈದ್ಯಕೀಯ ಮೂಲಸೌಕರ್ಯ ಕಲ್ಪಿಸಿ ಸ್ಥಳೀಯ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ಕಲ್ಪಿಸುವಲ್ಲಿ ಹಿಂದೆ ಬಿದ್ದಿದ್ದು, ಕಡಿಮೆ ಸೀಟು ನೀಡುತ್ತಿವೆ.
ಅರುಣಾಚಲ ಪ್ರದೇಶ: 50, ಮೇಘಾಲಯ: 50, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು: 114, ದಾದ್ರಾ ಮತ್ತು ನಗರ ಹವೇಲಿ: 177, ಸಿಕ್ಕಿಂ: 150 ಸೀಟುಗಳನ್ನು ಹೊಂದಿದ್ದು, ಈ ರಾಜ್ಯಗಳಲ್ಲಿ ಸರಕಾರಿ ವೈದ್ಯಕೀಯ ಸೀಟುಗಳ ಅತ್ಯಂತ ಕಡಿಮೆ ಇವೆ. ಅಲ್ಲದೇ ಕೆಲವು ರಾಜ್ಯಗಳಲ್ಲಿ ಇನ್ನೂ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ.
ಶುಲ್ಕ ವ್ಯತ್ಯಾಸ: ಪ್ರಸಕ್ತ ಸಾಲಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳು ಮುಖ್ಯವಾಗಿ ಆರ್ಥಿಕತೆಯ ಹಾಗೂ ವೆಚ್ಚದ ಕುರಿತು ಗಮನಹರಿಸಬೇಕಾಗುತ್ತದೆ. ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸೇರಬೇಕಾದರೆ ಹೆಚ್ಚು ಹಣ ವ್ಯವಯಿಸಬೇಕಾಗುತ್ತದೆ.
ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ: ಸರಕಾರಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಅತ್ಯಂತ ಕೈಗೆಟಕುವ ಶುಲ್ಕವಿರುತ್ತದೆ. ವಾರ್ಷಿಕವಾಗಿ ಕೇವಲ 1.5 ಲಕ್ಷದವರೆಗೆ ಮಾತ್ರ ಶುಲ್ಕವಿದ್ದು, 5.5 ವರ್ಷಗಳಿಗೆ ಕೇವಲ 7.5 ಲಕ್ಷದಿಂದ 10 ಲಕ್ಷದವರೆಗೆ ವೆಚ್ಚ ತಗಲುತ್ತದೆ. ಅದರಲ್ಲಿಯೂ ಮುಖ್ಯವಾಗಿ ಏಮ್ಸನಂತ ಸಂಸ್ಥೆಗಳಲ್ಲಿ ಸೀಟು ಸಿಕ್ಕರೆ ದೇಶದ ಅತ್ಯಂತ ಕಡಿಮೆ ವೆಚ್ಚ ಹಾಗೂ ಕೈಗೆಟಕುವ ದರದಲ್ಲಿ ಎಂಬಿಬಿಎಸ್ ಮುಗಿಸಬಹುದು.
ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ : ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡೀಮ್ಡ ವಿಶ್ವವಿದ್ಯಾಲಯಗಳ ಶುಲ್ಕಗಳು ಒಂದೊಂದು ವಿದ್ಯಾಲಯಗಳಲ್ಲಿ ಬದಲಾಗಿರುತ್ತವೆ. ವಾರ್ಷಿಕವಾಗಿ 10 ಲಕ್ಷ ರೂ.ಗಳಿಂದ 25 ಲಕ್ಷವರೆಗೆ. ಒಟ್ಟು ಎಂಬಿಬಿಎಸ್ ವೆಚ್ಚ: ರೂ. 50 ಲಕ್ಷ ರೂ.ಗಳಿಂದ 1.25 ಕೋಟಿ ರೂ.ಗಳವರೆಗೆ. ವಿಭಿನ್ನ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಡೀಮ್ಡ್ ವಿಶ್ವವಿದ್ಯಾಲಯಗಳು ಅತ್ಯಧಿಕ ಶುಲ್ಕ ವಿಧಿಸುತ್ತವೆ.
ಭಾರತದಲ್ಲಿ 2014ರಲ್ಲಿ 387 ವೈದ್ಯಕೀಯ ಮಹಾವಿದ್ಯಾಲಯಗಳಿಂದ ಕೇವಲ 51 ಸಾವಿರ ಎಂಬಿಬಿಎಸ್ ಸೀಟುಗಳು ಲಭ್ಯವಿದ್ದವು. ಕಳೆದ 10 ವರ್ಷಗಳಲ್ಲಿ, ದೇಶಾದ್ಯಂತ 319 ವೈದ್ಯಕೀಯ ಮಹಾವಿದ್ಯಾಲಯಗಳು ಕಾರ್ಯಾರಂಭ ಮಾಡಿದ್ದು ಈಗ 780 ಮಹಾವಿದ್ಯಾಲಯಗಳಿವೆ. ಕಳೆದ 10 ವರ್ಷಗಳಲ್ಲಿ ಎಂಬಿಬಿಎಸ್ ಹಾಗೂ ಸ್ನಾತ್ತಕೋತ್ತರ ಸೀಟುಗಳಲ್ಲಿ ಶೇ.130 ರಷ್ಟು ಹೆಚ್ಚಳವಾಗಿದೆ. ಈಗ 1.18 ಲಕ್ಷಕ್ಕೂ ಅಧಿಕ ಸೀಟುಗಳು ಲಭ್ಯವಿವೆ.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ(PMSSY)ಡಿಯಲ್ಲಿ ಏಮ್ಸ್ ಸಂಸ್ಥೆಗಳನ್ನು ವಿಸ್ತರಿಸಲಾಗುತ್ತಿದೆ. ಅಲ್ಲದೇ ವಯದ್ಯಕೀಯ ಸೇವೆ ವಂಚಿತ ಜಿಲ್ಲೆಗಳಲ್ಲಿ ಸರಕಾರಿ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಇದು ವೈದ್ಯರು-ಜನಸಂಖ್ಯೆ ಅನುಪಾತವನ್ನು ಸುಧಾರಿಸುವ ಮತ್ತು ಪ್ರಾದೇಶಿಕ ಆರೋಗ್ಯ ಅಸಮಾನತೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಮಾಹಿತಿ: ಇಂಡಿಯಾ ಟುಡೆ