ಬೆಳಗಾವಿ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವದಕ್ಕಾಗಿ ವಿಧಾನ ಮಂಡಳ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲು ಡಿಮ 5 ರಂದು ಬೆಳಗಾವಿಯಲ್ಲಿ ಸರ್ವ ಪಕ್ಷಗಳ ಮತ್ತು ಶಾಸಕರ ಸಭೆ ನಡೆಸಲಾಗುವದು ಎಂದು ಕೂಡಲಸಂಗಮ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದಿಲ್ಲಿ ಹೇಳಿದರು.
ನಗರದಲ್ಲಿ ಪಂಚಮಸಾಲಿ ಸಮಾಜದ ರಾಜ್ಯಕಾರಣಿ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2 ಎ ಮೀಸಲಾತಿ ನೀಡಬೇಕು. ಎಲ್ಲ ಲಿಂಗಾಯತ ಒಳಪಂಗಡಗಳನ್ನು ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಈ ಸಂಬಂಧ ಮೂರು ವರ್ಷಗಳಿಂದ ಹೋರಾಟ ಮಾಡಿ ರಾಜ್ಯ ಹಾಗೂ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಚಳಿಗಾಲದ ಅಧಿವೇಶನ ವೇಳೆ ಬೆಳಗಾವಿಯಲ್ಲಿ ನಮ್ಮ ಸಮಾಜದ ಹಾಲಿ-ಮಾಜಿ ಶಾಸಕರ ಸಭೆ ನಡೆಯಲಿದ್ದು, ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ ನಮ್ಮ ನಿಯೋಗ ಸಿಎಂ ಭೇಟಿ ಮಾಡಿ ಚರ್ಚಿಸಿತ್ತು. ಹಿಂದುಳಿದ ಆಯೋಗದ ವರದಿ ಪಡೆದು ಚರ್ಚೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯಲಿಲ್ಲ, ಹೀಗಾಗಿ ಹೋರಾಟ ಮರಳಿ ಆರಂಭಿಸಿದ್ದೇವೆ. ಶ್ರಾವಣ ಮಾಸದಲ್ಲಿ ಇಷ್ಟಲಿಂಗ ಪೂಜೆ ಮೂಲಕ ನಿಪ್ಪಾಣಿಯಿಂದ ಹೋರಾಟ ಆರಂಭಿಸಲಾಯಿತು.
ಚಳಿಗಾಲ ಅಧಿವೇಶನ ವೇಳೆ ಸರ್ಕಾರದ ಗಮನ ಸೆಳೆಯಲಾಗುವದು. ನಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಿಎಂಗೆ ಮನವಿ ಮಾಡುತ್ತೇವೆ.
ಅಧಿವೇಶನ ವೇಳೆ ಸುವರ್ಣ ಸೌಧ ಎದುರು ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲಿದ್ದೇವೆ. ಸಿಎಂ ಸಭೆ ಬಳಿಕ ನಮ್ಮ ಶಾಸಕರ ಜೊತೆಗೆ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇವೆ. ಲೋಕಸಭೆ ಚುನಾವಣೆ ಒಳಗೆ ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಇಲ್ಲವಾದರೆ ಬೆಂಗಳೂರು, ಬೆಳಗಾವಿ, ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಬೇಕಾಗುತ್ತದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೂಡಲಸಂಗಮ ಸ್ವಾಮೀಜಿ ಎಚ್ಚರಿಕೆ ರವಾನಿಸಿದ್ದಾರೆ.
ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಶಶಿಕಾಂತ ನಾಯಕ, ಶಿವಶಂಕರಪ್ಪ ಸೇರಿ ಹಲವರು ಉಪಸ್ಥಿತರಿದ್ದರು.