ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅವಶ್ಯವಿರುವ ಸುಮಾರು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ರನ್ ವೇ ಮತ್ತು ಟರ್ಮಿನಲ್ ಜಮೀನು ಅಗತ್ಯತೆ ಹಾಗೂ ಅದರ ಸಮರ್ಪಕ ಬಳಕೆಯ ಕುರಿತು ನೀಲನಕ್ಷೆಯ ಜೊತೆಗೆ ಸಮಗ್ರ ವರದಿಯನ್ನು ಸಲ್ಲಿಸಿದರೆ, ಅದನ್ನು ಆಧರಿಸಿ ಅಗತ್ಯಕ್ಕನುಗುಣವಾಗಿ  ಜಮೀನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಂದಿಲ್ಲಿ ತಿಳಿಸಿದರು.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡ ಮತ್ತು ಇತರ ಸಂಬಂಧಿತ ಕಾಮಗಾರಿಗಳಿಗೆ 229.57 ಕೋಟಿ ರೂ. ಬಿಡುಗಡೆ ಮಾಡಿದೆ. ಹೊಸ ಟರ್ಮಿನಲ್ ಕಟ್ಟಡಕ್ಕಾಗಿ 16,400 ಚದರ ಮೀಟರ್ ಮತ್ತು ಅಸ್ತಿತ್ವದಲ್ಲಿರುವ ಟರ್ಮಿನಲ್ ಅನ್ನು ಆಗಮನಕ್ಕಾಗಿ ಪರಿವರ್ತಿಸಲು ಹೆಚ್ಚುವರಿ 3,600 ಚದರ ಮೀಟರ್‌ಗಳನ್ನು ಒಳಗೊಂಡಿರುವ 20,000 ಚದರ ಮೀಟರ್ ಪ್ರದೇಶವನ್ನು ಒಳಗಂಡಿದೆ.

ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವುದಕ್ಕಾಗಿ ಬುಧವಾರ(ನ.8) ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಜಮೀನು ಒದಗಿಸಲಾಗಿದೆ. ಅದ್ದರಿಂದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆ, ಸಿಗ್ನಲ್ ದೀಪಗಳ ಅಳವಡಿಕೆಗೆ ಅತ್ಯಗತ್ಯವಾಗಿರುವ ಜಮೀನು ಮಾತ್ರ ಒದಗಿಸಲಾಗುವುದು. ಸಾಧ್ಯವಾದಷ್ಟು ಕಾಮಗಾರಿಗಳನ್ನು ಈಗಾಗಲೇ ಒದಗಿಸಲಾಗಿರುವ ಜಮೀನಿನಲ್ಲಿ ಕೈಗೊಳ್ಳಬೇಕು ಸಲಹೆ ನೀಡಿದ ಅವರು ಸ್ಥಳೀಯ ಜನರಿಗೆ ಪರ್ಯಾಯ ರಸ್ತೆ ಮತ್ತಿತರ ಸೌಕರ್ಯಗಳನ್ನು ಒದಗಿಸುವ ಬಗ್ಗೆ ವಿಮಾನ ನಿಲ್ದಾಣದ ನಿರ್ದೇಶಕರು ಸ್ಪಷ್ಟ ಹಾಗೂ ಲಿಖಿತ ಮಾಹಿತಿಯನ್ನು ಒದಗಿಸಬೇಕು ಎಂದರು.

ಟರ್ಮಿನಲ್ ವಿಸ್ತರಣೆಗೆ ಎಷ್ಟೇ ಜಮೀನು ಅಗತ್ಯವಿದ್ದರೂ ಅದನ್ನು ನೀಡಲಾಗುವುದು. ಈಗಾಗಲೇ ಸ್ಮಶಾನ ಭೂಮಿಯನ್ನು ಒದಗಿಸಲಾಗಿರುತ್ತದೆ. ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ 14.05 ಎಕರೆ ಜಮೀನು ಏರ್ ಫೋರ್ಸ್ ಸ್ವಾಧೀನದಲ್ಲಿರುವುದರಿಂದ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು  ಹೇಳಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕರಾದ ತ್ಯಾಗರಾಜನ್ ಅವರು, ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅಗತ್ಯವಿರುವ ಜಮೀನು ಒದಗಿಸುವುದರ ಜತೆಗೆ ಇನ್ನಿತರ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.

ಸ್ಥಳೀಯರಿಗೆ ಪರ್ಯಾಯ ರಸ್ತೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರಾದ ವಿಜಯಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.