ಬೆಳಗಾವಿ: ‘ಸರ್ಕಾರ ಬೀಳಬಾರದು, ಬಹಳ ದಿನ ಬಾಳಬೇಕು ಎಂಬ ಆಕಾಂಕ್ಷೆ ನಮ್ಮದು. ಆದರೆ, ಯೋಗ್ಯತೆ ಗೊತ್ತಾಗಿ ಜನರೇ ಇದನ್ನು ಬೀಳಿಸುವರು. ‘ಕಾಂಗ್ರೆಸ್‌ ಸರ್ಕಾರ ಬೀಳಿಸುವ ಉದ್ದೇಶ ನಮಗಿಲ್ಲ. ಒಂದು ವೇಳೆ ಬಿದ್ದರೆ, ಅದಕ್ಕೆ ಬೆಳಗಾವಿ ರಾಜಕಾರಣವೇ ಸರಕಾರದ ಪತನಕ್ಕೆ ಕಾರಣವಾಗುತ್ತದೆ. ಅಲ್ಲದೇ ಈ ಬಾರಿ ಸರ್ಕಾರ ಬೀಳಬೇಕೆಂದರೆ ಮಹಾರಾಷ್ಟ್ರ ಮಾದರಿಯ ಪ್ರಯತ್ನ ಕಾಂಗ್ರೆಸ್‌ನಲ್ಲೇ ನಡೆಯಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2019ರಲ್ಲಿ ಸರ್ಕಾರ ಬೀಳಿಸಿದ್ದು ರಮೇಶ ಜಾರಕಿಹೊಳಿ ಮತ್ತು ತಂಡ ಹೊರತು ಬಿಜೆಪಿ ಅಲ್ಲ. ಆಗ ಡಿ.ಕೆ. ಶಿವಕುಮಾರ್‌ ಉಪಟಳ ಹೆಚ್ಚಿದ್ದ ಕಾರಣ, ಬುದ್ಧಿ ಕಲಿಸಲು ಸರ್ಕಾರ ಬೀಳಿಸಿದೆ. ಈಗ ಅಂಥ ಕೆಲಸಕ್ಕೆ ನಾನು ಕೈಹಾಕಲ್ಲ. ಅದಕ್ಕೂ ಮುನ್ನ ನಾವು ಬೀಳಿಸಿದರೆ ಕಾಂಗ್ರೆಸ್‌ನವರು ಮತ್ತೆ ಅನುಕಂಪ ಪಡೆದು ಮತ್ತೆ ಗೆಲ್ಲುತ್ತಾರೆ. ‘ಬಿಜೆಪಿ ಆ‍ಪರೇಷನ್‌ ಕಮಲ ಮಾಡಿ ಸರ್ಕಾರ ಬೀಳಿಸಲು ಯತ್ನಿಸುತ್ತಿದೆ ಎಂಬುದು ಸುಳ್ಳು. ‘ಗ್ಯಾರಂಟಿ’ಗಳನ್ನು ನೀಗಿಸಲು ಆಗದ ಕಾಂಗ್ರೆಸ್‌ನವರು ಬಿಜೆಪಿ ಹೆಸರು ಕೆಡಿಸುತ್ತಿದ್ದಾರೆ. ಜನರ ಚಿತ್ತ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಅವರು ತಿಳಿಸಿದರು.

ಶಿವಕುಮಾರ್‌ ದಿನಕ್ಕೊಂದು ಖಾಲಿಡಬ್ಬ ಬಾರಿಸುತ್ತಿದ್ದು, ಅನಿವಾರ್ಯವಾಗಿ ಬಾಯಿ ಬಿಡಬೇಕಿದೆ. ಮಾಜಿ ಶಾಸಕರಿಗೆ ಸಿಡಿ ಹೆಸರಿನಲ್ಲಿ ಬ್ಲ್ಯಾಕ್‌ ಮಾಡುತ್ತಿದ್ದಾರೆ. ಶಿವಕುಮಾರ್‌ ಬೆಳಗಾವಿ ರಾಜಕಾರಣಕ್ಕೆ ಕೈ ಹಾಕಿದ್ದರಿಂದ ಆಗಿನ ಸರ್ಕಾರ ಬಿದ್ದಿತ್ತು. ಈಗಲೂ ಅವರು ಅದೇ ರೀತಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಿವಕುಮಾರ್‌ ಶೀಘ್ರವೇ ಮಾಜಿ ಸಚಿವರಾಗುವರು. ಅವರು ಜೈಲಿಗೆ ಹೋಗುವರೋ ಇಲ್ವೊ ಗೊತ್ತಿಲ್ಲ. ಆದರೆ, ಮಾಜಿ ಆಗುವುದು ಗ್ಯಾರಂಟಿ ಎಂದ ಅವರು, ಶಿವಕುಮಾರ್‌ ಸಚಿವರಾಗಿ ಇರುವವರೆಗೆ ಸರ್ಕಾರ ಅಪಾಯದಲ್ಲಿದೆ.  ಅವರೊಬ್ಬ ಪುಕ್ಕಲು ಮನುಷ್ಯ. ಅವರು ಮತ್ತು ಅವರ ಆಪ್ತರು ಯಾವತ್ತೂ ನೇರ ಹೋರಾಡಿ ಗೆದ್ದವರಲ್ಲ. ಬರೀ ಹೊಂದಾಣಿಕೆ, ಹಿಂಬಾಗಿಲಿನ ಗೆಲುವು ಕಂಡಿದ್ದಾರೆ. ಈ ಬಾರಿ ಲಾಟರಿ ಹೊಡೆದಿದ್ದಾರೆ. ಈ ಲಾಟರಿ ಸಚಿವರೆಲ್ಲ ಬಹಳ ದಿನ ನಿಲ್ಲುವುದಿಲ್ವೆಂದು ವ್ಯಂಗ್ಯವಾಡಿದರು.