ಬೆಳಗಾವಿ: ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟವು ಕೇವಲ ತನ್ನ ಪ್ರಕೃತಿ ಸೌಂದರ್ಯ, ದಟ್ಟ ಮಂಜು, ಹಸಿರು ಹುಲ್ಲಿನ ಗುಡ್ಡ, ಜಲಪಾತಗಳಿಂದ ಮಾತ್ರ ಪ್ರಸಿದ್ಧಿ ಪಡೆದಿಲ್ಲ. ಹಲವು ವಿಸ್ಮಯಗಳಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಕವಳೆಸಾದ್ ತನ್ನ ವಿಭಿನ್ನತೆಯಿಂದಲೇ ಗುರುತಿಸಿಕೊಂಡಿದೆ.
ಅಂಬೋಲಿ ಜಲಪಾತ ತಮಗೆಲ್ಲಾ ಗೊತ್ತಿದೆ. ಅದಕ್ಕೂ ಮೊದಲು 10 ಕಿ‌.ಮೀ. ಅಂತರದಲ್ಲಿ ಬರುವುದೇ ಈ ಕವಳೆಸಾದ್ ವಿವ್ ಪಾಯಿಂಟ್. ನೋಡಲು‌ ಮಿನಿ ಜೋಗ್ ದಂತೆ ಕಾಣುತ್ತದೆ. ಅಂಬೋಲಿಗೆ ಹೋದವರು ಇಲ್ಲಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ. ಹೀಗೆ ಬಂದವರು ಖರ್ಚಿಪ್, ಬಾಟಲಿ, ಛತ್ರಿ ಸೇರಿ ಹಗುರವಾದ ವಸ್ತುಗಳನ್ನು ಕೆಳಗೆ ಎಸೆದರೆ ಅದು ವಾಪಸ್ಸು ಮೇಲೆಯೇ ಬರುವುದು ಇಲ್ಲಿನ ವಿಶೇಷ.
ಮಹಾರಾಷ್ಟ್ರ ರಾಜ್ಯದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ‌ ತಾಲ್ಲೂಕಿನಲ್ಲಿ ಬರುವ ಕವಳೆಸಾದ್ ವಿವ್ ಪಾಯಿಂಟ್ ಹಚ್ಚ ಹಸಿರಿನ ಗುಡ್ಡದಲ್ಲಿ ಐದಕ್ಕೂ ಅಧಿಕ ಚಿಕ್ಕ ಚಿಕ್ಕ ಜಲಪಾತಗಳು ಕಾಣಸಿಗುತ್ತವೆ. ತುಂಬಾ ಆಳ ಮತ್ತು ಅಗಲವಾದ ಪ್ರದೇಶದಲ್ಲಿ ಚಾಚಿಕೊಂಡಿರುವ ಈ ಪ್ರದೇಶವು ತುಂಬಾ ವಿಶಾಲವಾಗಿದೆ. ಸುರಿಯುವ ಮಳೆ, ಸುತ್ತಲೂ ಹಚ್ಚ ಹಸಿರಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಗಾಳಿಯ ರಭಸಕ್ಕೆ ಕೆಳಗಿನಿಂದ ಮೇಲಕ್ಕೆ ಚಿಮ್ಮುವ ನೀರು ಪ್ರವಾಸಿಗರನ್ನು ಕುಣಿಯುವಂತೆ ಮಾಡುತ್ತದೆ. ಇನ್ನು ಹಗುರ ವಸ್ತುಗಳನ್ನು ಪಾತಾಳಕ್ಕೆ ಎಸೆದು ಜನರು ಸಖತ್ ಎಂಜಾಯ್ ಮಾಡುತ್ತಾರೆ.
ಮುಂಗಾರು ಮಳೆ ಆರಂಭವಾಗಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಫೋಟೊ ತೆಗೆಸಿಕೊಂಡು, ಪ್ರಕೃತಿ ಸೌಂದರ್ಯವನ್ನು ಸವಿದು ಸಂಭ್ರಮಿಸುತ್ತಿದ್ದಾರೆ. ದೂರದ ಕಾಶ್ಮೀರ, ಹಿಮಾಚಲ ಪ್ರದೇಶಕ್ಕೆ ನಮಗೆ ಹೋಗಲು ಆಗಲ್ಲ. ಅಲ್ಲಿನ ವಾತಾವರಣ ಇಲ್ಲಿಯೇ ಕಣ್ತುಂಬಿಕೊಳ್ಳಬಹುದು ಅಂತಾ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರವಾಸಿಗರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬೆಳಗಾವಿಯಿಂದ ಆಗಮಿಸಿದ್ದ ಅಭಿಷೇಕ, ನಮ್ಮ ತಾಯಿ, ಸಹೋದರ-ಸಹೋದರಿಯರ ಜೊತೆಗೆ ಬಂದಿದ್ದೇನೆ. ಮಾನ್ಸೂನ್ ನಲ್ಲಿ ಅತ್ಯುತ್ತಮ ವಾತಾವರಣ ಇಲ್ಲಿರುತ್ತದೆ. ಇದನ್ನು ರಿವರ್ಸ್ ವಾಟರ್ ಫಾಲ್ಸ್ ಅಂತಾ ಕರೆಯುತ್ತಾರೆ. ಹಗುರವಾದ ವಸ್ತುಗಳನ್ನು ಎಸೆದಾಗ ಅದು ವಾಪಸ್ಸು ಬರುವುದನ್ನು ನೋಡುವುದೇ ಖುಷಿ. ವಾರಪೂರ್ತಿ ದುಡಿಯುವುದು ಇದ್ದೇ ಇರುತ್ತದೆ. ಒಂದು ದಿನ ಇಂಥ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಬಂದು ಮಾನ್ಸೂನ್ ಎಂಜಾಯ್ ಮಾಡುವಂತೆ ಹೇಳಿದರು.
ಹೀನಾ ಮಕಾನದಾರ್ ಎಂಬುವವರು ಮಾತನಾಡಿ, ನಾವು ಮಹಾರಾಷ್ಟ್ರದ ಅಜರಾದವರು. ಪ್ರತಿವರ್ಷ ಮಳೆಗಾಲದಲ್ಲೂ ಇಲ್ಲಿಗೆ ಬರುತ್ತೇವೆ. ಮಂಜು ಕೆಳಗಿನಿಂದ ಮೇಲೆ ಬರುತ್ತದೆ. ಅದೇರೀತಿ ಖರ್ಚಿಪ್ ಸೇರಿ ಹಗುರ ವಸ್ತು ಕೆಳಗೆ ಎಸೆದರೆ ಮೇಲೆ ಹಾರಿ ಬರುತ್ತವೆ. ಸ್ವತಃ ನಾವು ಜಿಗಿದರೆ ವಾಪಸ್ಸು ಬರುವುದಿಲ್ಲ. ತುಂಬಾ ಎಚ್ಚರಿಕೆಯಿಂದ ಇಲ್ಲಿನ ಪ್ರಕೃತಿಯನ್ನು ಆಸ್ವಾದಿಸಬೇಕು ಎಂದರು.
ಎಚ್ಚರಿಕೆ ವಹಿಸಿ:
ಕವಳೆಸಾದ್ ಪ್ರದೇಶ ತುಂಬಾ ಅಪಾಯಕಾರಿ ಆಗಿದೆ. ದೂರದಿಂದಲೇ ನಿಂತು ಇಲ್ಲಿನ ವಾತಾವರಣ ಅನುಭವಿಸಬೇಕು. ಅದನ್ನು ಬಿಟ್ಟು ಹುಚ್ಚಾಟ ಪ್ರದರ್ಶಿಸಲು ಮುಂದಾದರೆ ಜೀವ ಕಳೆದುಕೊಳ್ಳುವುದು ನಿಶ್ಚಿತ. ಈಗಾಗಲೇ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದು, ಪ್ರವಾಸಿಗರು ಎಚ್ಚರಿಕೆ ವಹಿಸಬೇಕಿದೆ.
ಭೌತಶಾಸ್ತ್ರ ಪ್ರಾಧ್ಯಾಪಕರು ಹೇಳುವುದೇನು..?
ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ, ಒತ್ತಡದಲ್ಲಿನ ವ್ಯತ್ಯಾಸವು ಗಾಳಿಯ ವೇಗ ಮತ್ತು ದಿಕ್ಕನ್ನು ನಿರ್ಧರಿಸುತ್ತದೆ. ಗಾಳಿಯು ಯಾವಾಗಲೂ ಹೆಚ್ಚಿನ ಒತ್ತಡದಿಂದ ಕಡಿಮೆ ಒತ್ತಡಕ್ಕೆ ಸಾಗುತ್ತದೆ. ಹಾಗಾಗಿ,
ಗಾಳಿಯನ್ನು ಬೇಧಿಸಿ ಹೋಗಲಾರದ ಕರ್ಚಿಪ್, ಕಟ್ಟಿಗೆ ತುಂಡು, ಬೆಂಡು, ರಟ್ಟು, ಪ್ಲಾಸ್ಟಿಕ್ ಬಾಟಲಿ ಸೇರಿ ಮತ್ತಿತರ ವಸ್ತುಗಳನ್ನು ಎಸೆದಾಗ ಅವು ಮೇಲಕ್ಕೆ ಬರುತ್ತವೆ. ಕೆಳಗಿನಿಂದ ಮೇಲೆ ತಳ್ಳುವ ಗಾಳಿಯ ರಭಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆ ವಸ್ತುಗಳ ಮೇಲೆ ಬಂದು ಬೀಳುತ್ತವೆ ಎಂದರು.