ಬೆಳಗಾವಿ: ಮಹಾರಾಷ್ಟ್ರದ ಮೂವರು ಸಚಿವರು ಹಾಗೂ ಓರ್ವ ಸಂಸದ ಬೆಳಗಾವಿ ನಗರ ಅಥವಾ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಅ.31ರ ಬೆಳಿಗ್ಗೆ 6ರಿಂದ ನವೆಂಬರ್‌ 2ರ ಸಂಜೆಯವರೆಗೂ ಈ ನಾಯಕರು ಜಿಲ್ಲೆಯ ಗಡಿ ಪ್ರವೇಶಿಸಬಾರದು ಎಂದು ಆದೇಶಿಸಿದ್ದಾರೆ.

ನವೆಂಬರ್‌ 1ರಂದು ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್‌ ಕರಾಳ ದಿನಾಚರಣೆ ಆಚರಿಸಲು ಸಿದ್ಧತೆ ನಡೆಸಿದ್ದು, ಅದರಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ, ಸಚಿವ ದೀಪಕ ಕೇಸರಕರ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರಿಗೆ ಆಹ್ವಾನ ನೀಡಲಾಗಿದೆ. ಇವರು ಬೆಳಗಾವಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ. ಅಲ್ಲದೇ, ಕನ್ನಡ ಸಂಘಟನೆಗಳು ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿವೆ. ಆದ್ದರಿಂದ ರಾಜ್ಯೋತ್ಸವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ ನಾಲ್ವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.