ಬೆಳಗಾವಿ, ಅ.7: ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ನವೆಂಬರ್ 1 ರ ಬಳಿಕವೇ ಆರಂಭಿಸಬೇಕು; ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ (ಎಫ್.ಆರ್.ಪಿ.) ದರಗಳನ್ನು ಕಾರ್ಖಾನೆಯ ನೋಟಿಸ್ ಬೋರ್ಡಿಗೆ ಕಡ್ಡಾಯವಾಗಿ ಅಳವಡಿಸಬೇಕು. ಕಬ್ಬಿನ ತೂಕದಲ್ಲಿ ಮೋಸ ಕಂಡುಬಂದರೆ ಕಾರ್ಖಾನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
2023-24 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಕಾನೂನಾತ್ಮಕ ವ್ಯಾಪ್ತಿಯಲ್ಲಿ ಈಡೇರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ರಾಜ್ಯ ಅಥವಾ ಕೇಂದ್ರ ಸರಕಾರದ ಮಟ್ಟದಲ್ಲಿ ಇರುವ ವಿಷಯಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಲ್ಲದೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಕರಡು ಎಫ್.ಆರ್.ಪಿ. ದರಗಳ ಪ್ರತಿಗಳನ್ನು ಎಲ್ಲ ರೈತ ಪ್ರತಿನಿಧಿಗಳಿಗೆ ನೀಡುವುದರ ಜತೆಗೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.
ತೂಕ ವಂಚನೆ-ಕಾನೂನು ಕ್ರಮ: ತೂಕ ಮತ್ತು ಅಳತೆಯಲ್ಲಿ ಏನೇ ಲೋಪದೋಷಗಳು ಅಥವಾ ವ್ಯತ್ಯಾಸ ಕಂಡುಬಂದಾಗ ರೈತರು ದೂರು ನೀಡಿದರೆ ಸಮಕ್ಷಮದಲ್ಲಿ ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಕಬ್ಬು ಪೂರೈಕೆದಾರರು ಹೊರಗಡೆ ತೂಕ ಮಾಡಿಸಿಕೊಂಡು ಬಂದಾಗ ಕಾರ್ಖಾನೆಯವರು ಕಬ್ಬು ನಿರಾಕರಿಸುವಂತಿಲ್ಲ; ಆದರೆ ಕಾರ್ಖಾನೆಯ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಹೇಳಿದರು.
ರೈತರೇ ಸರಕಾರದ ಸಹಾಯಧನ ಪಡೆದುಕೊಂಡು ತೂಕಯಂತ್ರ(ವೇಬ್ರಿಡ್ಜ್)ವನ್ನು ಸ್ಥಾಪಿಸಿಕೊಳ್ಳಬಹುದು ಎಂದ ಅವರು, ಈಗಾಗಲೇ ಆರಂಭಿಸಲಾಗಿರುವ ಅಳಗವಾಡಿಯ ಕಾರ್ಖಾನೆಯ ಕುರಿತು ಪರಿಶೀಲಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಮಾತನಾಡಿ ಕಾರ್ಖಾನೆ ಆರಂಭಿಸುವಾಗ ಕಡ್ಡಾಯವಾಗಿ ಪ್ರತಿದಿನ ಒಂದೊಂದು ಕಾರ್ಖಾನೆಯ ತೂಕ ಯಂತ್ರಗಳನ್ನು ಪರಿಶೀಲಿಸಬೇಕು. ಕಬ್ಬು ಪೂರೈಕೆದಾರ ರೈತರು ಹೊರಗಡೆ ತೂಕ ಮಾಡಿಸಿಕೊಂಡು ಬಂದಾಗ ಕಾರ್ಖಾನೆಯವರು ಅವರನ್ನು ಒಳಗೆ ಬಿಡದಿದ್ದರೆ ಅಂತಹ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ಡಾ.ಖಂಡಗಾವಿ ಮಾತನಾಡಿದರು.
ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರನ್ನು ಕೂಡ ಸಭೆಗೆ ಕರೆಸಿ ಚರ್ಚಿಸಿದಾಗ ಮಾತ್ರ ಸಮಸ್ಯೆ ಬಗೆಹರಿಯಲಿದೆ. ಎಲ್ಲರ ಉಪಸ್ಥಿತಿಯಲ್ಲಿಯೇ ಸಭೆ ನಡೆಸಲು ರೈತರು ಮನವಿ ಮಾಡಿಕೊಂಡರು. ಕೆಲ ಕಾರ್ಖಾನೆಗಳು ದರ, ತೂಕದಲ್ಲಿ ಮೋಸ ಮಾಡುತ್ತಿರುವುದರಿಂದ ಕಾರ್ಖಾನೆಯ ಬದಲಾಗಿ ಪ್ರತ್ಯೇಕ ಸರಕಾರಿ ತೂಕ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು; ಅಂತಹ ಕೇಂದ್ರಗಳಲ್ಲಿ ನಿಗದಿಪಡಿಸಿದ ತೂಕದ ಪ್ರಕಾರವೇ ಕಾರ್ಖಾನೆಗಳು ಬಿಲ್ ಪಾವತಿಸಬೇಕು ಅಂದಾಗ ಮಾತ್ರ ತೂಕದಲ್ಲಿನ ಮೋಸವನ್ನು ತಡೆಗಟ್ಟುವುದು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುಭಾಷ್ ಶಿರಬೂರ, ಜೋಶಿ, ರಾಮನಗೌಡ ಪಾಟೀಲ, ಜಯಶ್ರೀ ಗುರಣ್ಣವರ, ಲಿಂಗರಾಜ ಪಾಟೀಲ, ಚೂನಪ್ಪ ಪೂಜಾರಿ, ಶಿವಶಿಂಗ್ ಮೊಖಾಶಿ ಮತ್ತಿತರ ರೈತ ಮುಖಂಡರು ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಪ್ರೊಬೋಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ, ಆಹಾರ, ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುಪಾಲನೆ ಹಾಗೂ ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್ ಸೇರಿದಂತೆ ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ತೂಕ ಮಾಪನ , ಜಿಲ್ಲಾ ಪರಿಸರ ಅಧಿಕಾರಿಗಳು ಉಪಸ್ಥಿತರಿದ್ದರು.