ಬೆಳಗಾವಿ : ಬೆಳಗಾವಿ ನಗರದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ ಕುರಿತು ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರ ಸತೀಶ್ ಜಾರಕಿಹೊಳಿ ಅವರು, ಸದ್ಯಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲಭ್ಯವಿರುವ ಒಟ್ಟಾರೆ 9 ಎಕರೆ ಜಾಗೆಯಲ್ಲಿ ಎರಡು ಎಕರೆ ಜಾಗೆಯನ್ನು ಬಳಸಿಕೊಂಡು  ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲು ಉದ್ಧೇಶಿಸಲಾಗಿದೆ ಎಂದು ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿ ಸೋಮವಾರ (ಜು.24) ನಡೆದ 2023-24 ನೇ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆವರಣದಲ್ಲಿ ಉಳಿದ ಜಾಗೆಯಲ್ಲಿ ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯ ಕಲ್ಪಿಸಲಾಗುವದು. ಈ ಯೋಜನೆ ಕುರಿತು ಜನ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಬೇಕೆಂದು ತಿಳಿಸಿದರು.

ರಸ್ತೆ ಅಗೆತ; ನಿಗಾ ವಹಿಸಿ

ರಸ್ತೆ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಕೇಬಲ್ ಅಳವಡಿಸಲು ಕೆಲವೆಡೆ ರಸ್ತೆ ಅಗೆಯಲಾಗುತ್ತಿದ್ದು, ಅನುಮತಿ ಇಲ್ಲದೇ ರಸ್ತೆ ಅಗೆಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ನಿಯಮಾವಳಿ ಪ್ರಕಾರ ದುಡ್ಡು ಪಾವತಿಸಿ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ತಡೆಹಿಡಿಯಬೇಕು ಎಂದ ಅವರು ಇಸ್ಲಾಂಪುರ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೂಡಲೇ ಪ್ರಕರಣಗಳನ್ನು ದಾಖಲಿಸಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಬೇಕು ಎಂದು ಸೂಚಿಸಿದರು.

ಗೋಶಾಲೆ ಆರಂಭಿಸಿ: ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರೂ ಕೆಲವೆಡೆ ಬರದ ಛಾಯೆ ಇದ್ದು, ಅವಶ್ಯಕತೆ ಆಧರಿಸಿ ಕಾಳಜಿ ಕೇಂದ್ರ, ಮೇವಿನ ಕೊರತೆ ಇರುವಲ್ಲಿ ಗೋಶಾಲೆ ಆರಂಭಿಸಿ. ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅನ್ನಭಾಗ್ಯ ಯೋಜನೆಯಡಿ ಎಲ್ಲ ಅರ್ಹ ಫಲಾನುಭವಿಗಳಿಗೆ ನಗದು ಜಮೆ ಮಾಡಬೇಕು ಎಂದು ಹೇಳಿದರು.

ಹೊಲಗಳಿಗೆ ಹೋಗುವ ರಸ್ತೆಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು. 2019-20 ನೇ ಸಾಲಿನಲ್ಲಿ ಪ್ರವಾಹ/ಅತಿವೃಷ್ಟಿ ಯಿಂದ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೂಡಲೇ ಮರು ಸಮೀಕ್ಷೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಿ. ಅಥಣಿ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರ ಸಭೆಯನ್ನು ನಡೆಸಿ ವಿಮಾ ಯೋಜನೆ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನೀಡಬೇಕು.  ಜಿಲ್ಲೆಯ ಕೆಲವೆಡೆ ಬರಗಾಲ ಪರಿಸ್ಥಿತಿ ಇರುವ ಬಗ್ಗೆ ಶಾಸಕರು ಗಮನಸೆಳೆದಾಗ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರು ಖುದ್ದಾಗಿ ಪರಿಶೀಲಿಸಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.