ಬೆಳಗಾವಿ: ‘ಕ್ರಿಕೆಟ್‌ ಹೊರತಾದ ಕ್ರೀಡೆಗಳಿಗೆ ಇಂದು ಭಾರತದಲ್ಲಿ ಮನ್ನಣೆ ಸಿಗುತ್ತಿದೆ. ಇಂಥ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆ ರೂಪಿಸಿವೆ’ ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜಿ.ಎಂ.‌ನಿಶ್ಚಿತಾ ಹೇಳಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ನಾಲ್ಕು ದಿನ ನಡೆಯಲಿರುವ ಅಸೋಸಿಯೇಷನ್‌ ಆಫ್ ಇಂಡಿಯನ್ ಯುನಿವರ್ಸಿಟೀಸ್‌ನ ದಕ್ಷಿಣ ಭಾರತದ ಅಂತರ ವಿ.ವಿ ಗಳ ಮಹಿಳಾ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

‘ಇಂದು ಯಾವುದೇ ಆಟದಲ್ಲಿ ಸಾಧನೆ ಮೆರೆಯುವುದು ಶೈಕ್ಷಣಿಕ ಪದವಿ ಪಡೆಯುವುದಕ್ಕೆ ಸಮ. ಹಲವು ಸರ್ಕಾರಿ ಸಂಸ್ಥೆಗಳಲ್ಲಿ ಕ್ರೀಡಾ ಸಾಧಕರಿಗೆ ಉದ್ಯೋಗವಕಾಶ ದಕ್ಕಿವೆ. ನಿಮ್ಮ ಅಭಿರುಚಿಗೆ ಅನುಗುಣವಾಗಿ ಕ್ರೀಡೆಯಲ್ಲಿ ಪಾಲ್ಗೊಂಡು, ದೇಶದ ಗೌರವ ಹೆಚ್ಚಿಸಿ’ ಎಂದು ಕರೆ ನೀಡಿದರು.

‘ಪ್ರತಿಯೊಬ್ಬ ಕ್ರೀಡಾಪಟು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಯಶಸ್ಸಿನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಂದೆಸಾಗಬೇಕು. ಯುವ ಕ್ರೀಡಾ ಪಟುಗಳನ್ನೂ ಹುಟ್ಟುಹಾಕಿ ಕ್ರೀಡಾರಂಗ ಸಬಲೀಕರಣಗೊಳಿಸಬೇಕು’ ಎಂದರು.

ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ, ‘ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಸುತ್ತವೆ. ವಿಟಿಯುದಲ್ಲಿ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ’ ಎಂದರು.

ಪ್ಯಾರಾ ಒಲಿಂಪಿಕ್‌ನಲ್ಲಿ ಸಾಧನೆ ಮೆರೆದ ಜೇರಲಿನ್ ಅನಿಕಾ ಅವರನ್ನು ಸತ್ಕರಿಸಲಾಯಿತು. ಕುಲಸಚಿವ ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಇದ್ದರು. ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟಸ್ವಾಮಿಗೌಡ ವರದಿ ವಾಚಿಸಿದರು. ಎನ್‌ಎಸ್‌ಎಸ್ ಸಂಯೋಜಕ ಪಿ.ವಿ.ಕಡಗದಕೈ ವಂದಿಸಿದರು. 95 ವಿಶ್ವವಿದ್ಯಾಲಯಗಳ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.