ಬೆಳಗಾವಿ: ಇದು ಮುಂಜಾಗ್ರತೆ ಮತ್ತು ಎಚ್ಚರ ವಹಿಸುವ ಕಾಲಘಟ್ಟ. ಆದರೆ, ಆತಂಕ ಪಡುವ ಅವಶ್ಯಕತೆ ಇಲ್ಲ. ಇನ್ನು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು. ಅದೇ ರೀತಿ ಮದುವೆ ಸೇರಿ ಹೆಚ್ಚು ಜನ ಸೇರುವಲ್ಲಿ ಮಕ್ಕಳು, ವೃದ್ಧರು ತೆರಳದಂತೆ ನೋಡಿಕೊಳ್ಳಬೇಕು. ಪದೇ ಪದೇ ಕೈ ತೊಳೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡಾದ ತಿಳಿಸಿದರು.
ಬೆಳಗಾವಿ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 15 ದಿನಗಳ ಹಿಂದೆ ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ. ಬಳಿಕ ನಮ್ಮ ದೇಶದಲ್ಲೂ ಪತ್ತೆ ಆಗುತ್ತಿವೆ. ಇನ್ನು ಕರ್ನಾಟಕದಲ್ಲಿ ಈವರೆಗೆ 32 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಬೆಳಗಾವಿಯಲ್ಲೂ 25 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಮೊದಲಿಗೆ ಯಳ್ಳೂರ ಕೆಎಲ್ಇ ಆಸ್ಪತ್ರೆಯಲ್ಲಿ ಆ ಮಹಿಳೆ ದಾಖಲಾಗಿದ್ದರು. ಈಗ ಡಾ.ಪ್ರಭಾಕರ್ ಕೋರೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
25 ವರ್ಷದ ಗರ್ಭಿಣಿಗೆ ಪ್ರಾಥಮಿಕ ಸಂಪರ್ಕ ಇರುವ 3 ಜನರನ್ನು ಮತ್ತು ದ್ವಿತೀಯ ಸಂಪರ್ಕ ಇರುವ 8 ಜನರನ್ನು ಪರೀಕ್ಷೆ ಮಾಡಿದ್ದೇವೆ. ಸೋಂಕಿತ ಮಹಿಳೆ ಪುಣೆಯಿಂದ ಬಂದಿದ್ದರು ಎನ್ನುತ್ತಿದ್ದರು. ಆದರೆ, ಅವರ ಪತಿ ಇಲ್ಲ ಅಂತಾ ಹೇಳಿದ್ದಾರೆ. ಹಾಗಾಗಿ, ಅವರ ಟ್ರಾವೆಲ್ ಹಿಸ್ಟರಿ ಸರಿಯಾಗಿ ಸಿಗುತ್ತಿಲ್ಲ ಎಂದ ಡಾ.ಈಶ್ವರ ಗಡಾದ ಅವರು, ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು ಕೋವಿಡ್ ಲಕ್ಷಣಗಳು. ಇದರಿಂದ ಕೊರೊನಾ ಶುರುವಾಗುತ್ತದೆ. ಇದರಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ, ನಿರ್ಲಕ್ಷ್ಯ ಮಾಡಬಾರದು. ಇದು ಹಂತ ಹಂತವಾಗಿ ನ್ಯುಮೋನಿಯಾ ಆಗಿ ಪರಿವರ್ತನೆ ಆಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾಗಿ, ಆ ರೀತಿ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ನಾವು ಒಳ್ಳೆಯ ಚಿಕಿತ್ಸೆ ನೀಡಿ ಗುಣಮುಖ ಮಾಡುತ್ತೇವೆ ಎಂದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ ಪರೀಕ್ಷೆ ಸೇರಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮ ಸಿಬ್ಬಂದಿಗಳಿಗೆ ಎಲ್ಲ ರೀತಿಯ ಮಾಹಿತಿ ಒದಗಿಸಿದ್ದೇವೆ. ಇನ್ನು ಬಿಮ್ಸ್ ಆಸ್ಪತ್ರೆಯಲ್ಲಿ 10 ಬೆಡ್ ಗಳನ್ನು ಮೀಸಲಿಟ್ಟಿದ್ದೆವೆ. ಅದೇ ರೀತಿ ತಾಲ್ಲೂಕಾ ಆಸ್ಪತ್ರೆಗಳಲ್ಲೂ 5 ಬೆಡ್ ಮೀಸಲು ಇಡಲಾಗಿದೆ ಎಂದು ಡಾ.ಈಶ್ವರ ಗಡಾದ ವಿವರಿಸಿದರು.
ಅದೇ ರೀತಿ ರೋಗ ಲಕ್ಷಣ ಇರುವರನ್ನು ಎಲ್ಲಾ ಕಡೆ ಸಮೀಕ್ಷೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಪರೀಕ್ಷೆ ಮಾಡಿದ 8 ಜನರ ವರದಿ ನೆಗೆಟಿವ್ ಬಂದಿದೆ. ಪರೀಕ್ಷೆಗೆ ಬೇಕಾದ ಎಲ್ಲಾ ವೈದ್ಯಕೀಯ ಸಾಮಗ್ರಿಗಳು ಲಭ್ಯಯಿವೆ. ಏನಾದರೂ ಕೊರತೆ ಕಂಡು ಬಂದರೆ ಖರೀದಿಸಲಾಗುತ್ತದೆ. ಸಣ್ಣ ಮಕ್ಕಳು, ವೃದ್ಧರು, ಗರ್ಭಿಣಿಯರು, ಸಕ್ಕರೆ ಕಾಯಿಲೆ ಇರುವ ರೋಗಿಗಳು ಸೇರಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತವರು ಹೆಚ್ಚು ಸುರಕ್ಷತೆ ವಹಿಸಬೇಕು ಎಂದರು.
ಮೊದಲ, ಎರಡನೇ ಕೋವಿಡ್ ಅಲೆಯಲ್ಲಿ ಇದ್ದ ಸ್ಥಿತಿ ಸದ್ಯಕ್ಕೆ ಇಲ್ಲ. ಹಾಗಾಗಿ, ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸುವ ಅವಶ್ಯಕತೆ ಸದ್ಯಕ್ಕೆ ಇಲ್ಲ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಡಾ.ಈಶ್ವರ ಗಡಾದ ಉತ್ತರಿಸಿದರು.
ಬೆಳಗಾವಿ: ಗರ್ಭಿಣಿ ಮಹಿಳೆಗೆ ತಗುಲಿದ ಕೋವಿಡ್ ಸೋಂಕು
