ಬೆಳಗಾವಿ : ಬೆಳಗಾವಿ-ಬೆಂಗಳೂರು ವಂದೇ ಭಾರತ ಗಗನಕುಸುಮವೇ ಸರಿ. ಬೆಳಗಾವಿ ಸಂಸದ ಜಗದೀಶ ಶೆಟ್ಟರ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದ್ದರೂ ಸದ್ಯಕ್ಕಂತೂ ಆ ರೈಲು ಬೆಳಗಾವಿಗೆ ಬರುವುದು ಕಷ್ಟ ಸಾಧ್ಯ.ಕೇವಲ ಭರವಸೆಯಾಗಿಯೇ ಉಳಿದ ರೈಲು.

ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಚಾಲನೆಗೆ 11 ತಿಂಗಳುಗಳೇ ಕಳೆದಿವೆ. ಆದರೂ, ಬೆಳಗಾವಿಯ ನಾಗರಿಕರಿಗೆ ಜನಪ್ರತಿನಿಧಿಗಳು ನೀಡಿದ್ದ ಭರವಸೆ ವ್ಯರ್ಥವಾಗಿದೆ. ನವೆಂಬರ್ 21, 2023 ರಂದು ಎಂಟು ಬೋಗಿಗಳ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಪಾದಾರ್ಪಣೆ ಮಾಡಿತು, ಗರಿಷ್ಠ 110 ಕಿಮೀ ವೇಗದಲ್ಲಿ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 5:45ಕ್ಕೆ ಹೊರಟು ಮಧ್ಯಾಹ್ನ 1:40 ಕ್ಕೆ ಬೆಳಗಾವಿಗೆ ಆಗಮಿಸಿತು. ಹಿಂದಿರುಗುವ ಪ್ರಯಾಣವು ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 10:10 ಕ್ಕೆ ಬೆಂಗಳೂರಿಗೆ ಮರಳಿತು, ಧಾರವಾಡದಿಂದ ಬೆಳಗಾವಿಗೆ ಪ್ರಯಾಣದ ಸಮಯ ಸುಮಾರು 2 ಗಂಟೆಗಳಿಂದ 2 ಗಂಟೆ 10 ನಿಮಿಷಗಳು.

ಇದೀಗ ಬೆಳಗಾವಿ ಮತ್ತು ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಆರಂಭವಾದ ನಂತರ ಬೆಳಗಾವಿ ಜನ ಈ ಬಗ್ಗೆ ಒಂದೇ ಸಮನೆ ಪ್ರಶ್ನಿಸ ತೊಡಗಿದರು. ಬೆಂಗಳೂರು ರೈಲು ಬೆಳಗಾವಿಗೆ ಬರಲು ಯಾವ ತಾಂತ್ರಿಕ ಅಡ್ಡಿ ಎಂದು ಕೇಳ ತೊಡಗಿದರು. ನಾವೇಕೆ ಯಾವಾಗಲೂ ಹಿಂದುಳಿದಿದ್ದೇವೆ? ತೀರಾ ಅಗತ್ಯವಿರುವ ಪ್ರದೇಶಕ್ಕೆ ರೈಲನ್ನು ಕೆಲವು ಗಂಟೆಗಳ ಕಾಲ ವಿಸ್ತರಿಸುವುದು ತುಂಬಾ ಕಷ್ಟವೇ? ಧಾರವಾಡ ಮತ್ತು ಬೆಳಗಾವಿ ನಡುವಿನ ಪ್ರಯಾಣದ ಅವಧಿ ಕೇವಲ 2 ಗಂಟೆಗಳು ಎಂದು ಪ್ರಾಯೋಗಿಕ ಚಾಲನೆಯಲ್ಲಿ ಸಾಬೀತಾಗಿದೆ. ಕಾರ್ಯಾಚರಣೆಯ ಮೂಲಸೌಕರ್ಯ ಈಗಾಗಲೇ ಅಸ್ತಿತ್ವದಲ್ಲಿದೆ. ಆಧುನಿಕ ಪರಿಹಾರಗಳು ಕೈಗೆಟುಕದೆ ಇರುವಾಗ ನಾವು ಎಷ್ಟು ಕಾಲ ಹಳತಾದ, ನಿಧಾನಗತಿಯ ಪರ್ಯಾಯಗಳ ಮೇಲೆ ಅವಲಂಬಿತರಾಗಿರುತ್ತೇವೆ?

ವಂದೇ ಭಾರತ್ ರೈಲು ಬೆಂಗಳೂರು ಮತ್ತು ಬೆಳಗಾವಿ ನಡುವೆ ಸಂಚರಿಸಬೇಕು ಎನ್ನುವುದು ಈ ಭಾಗದ ಜನತೆಯ ಅಗ್ರಹವಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಇನ್ನು ಮುಂದಾದರೂ ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಜನತೆಯ ಆಗ್ರಹವನ್ನು ಮನ್ನಿಸಿ ಬೆಂಗಳೂರು- ಬೆಳಗಾವಿ ನಡುವೆ ಮತ್ತೆ ವಂದೇ ಭಾರತ್ ರೈಲು ಸಂಚರಿಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ಈ ಭಾಗದ ಜನತೆಯ ಒತ್ತಾಸೆಯಾಗಿದೆ.