ಬೆಳಗಾವಿ: ಬೆಳಗಾವಿ ಮಹಾನಗರದಲ್ಲಿರುವ ಎಲ್ಲಾ ಅಂಗಡಿ-ಮುಂಗಟ್ಟು ಹಾಗೂ ವಾಣಿಜ್ಯ ವ್ಯವಹಾರಗಳನ್ನು ನಡೆಸುವ ಉದ್ದಿಮೆಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಆಯುಕ್ತೆ ಶುಭ ಸೂಚನೆ ರವಾನಿಸಿದ್ದಾರೆ.
ಮಂಗಳವಾರ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ಕರ್ನಾಟಕ ರಾಜ್ಯೋತ್ಸವಕ್ಕೆ ಈ ವರ್ಷ ಎಲ್ಲಿಲ್ಲದ ಸಂಭ್ರಮ. ಹೀಗಾಗಿ, ಪ್ರತಿಯೊಬ್ಬರೂ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ನಾಮಫಲಕ ಅಳವಡಿಸಲು ಮುಂದಾಗಬೇಕು. ರಾಜ್ಯ ಸರಕಾರ ಈ ವರ್ಷ ಕನ್ನಡ ಬಾವುಟದ ಬಣ್ಣದ ಐಡಿ ಹಾಕಿಕೊಳ್ಳಬೇಕು ಎಂದು ಸೂಚನೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಸಿಬ್ಬಂದಿ ವರ್ಗ ಕನ್ನಡ ಬಾವುಟದ ಐಡಿ ಕಾರ್ಡ್ ಹಾಕಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಬೆಳಗಾವಿ ನಗರದ ಎಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡವಿರುವದು ಕಡ್ಡಾಯ. ಈ ನಿಟ್ಟಿನಲ್ಲಿ ನಾವು ಟ್ರೇಡ್ ಲೈಸೆನ್ಸ್ ನೀಡುವಾಗ ಇನ್ನೊಮ್ಮೆ ಸರ್ವೇ ನಡೆಸಿ ಅನುಮತಿ ನೀಡಬೇಕಾಗಿದೆ. ನಾನು ಸ್ಥಳಕ್ಕೆ ತೆರಳಿ ಕನ್ನಡ ನಾಮ ಫಲಕ ಅಳವಡಿಸುವಂತೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಅವರು ತಿಳಿಸಿದರು.
ತೆರಿಗೆ ಕಟ್ಟುವತ್ತ ಬೆಳಗಾವಿ ಮಹಾನಗರದ ಜನತೆ ಗಮನಹರಿಸಬೇಕಾಗಿದ್ದು ವಿಶೇಷ ತಂಡದ ಮೂಲಕ ಮಾರ್ಚ್ ಒಳಗೆ ಎಲ್ಲಾ ತೆರಿಗೆದಾರರಿಂದ ತೆರಿಗೆ ತುಂಬಿಸಿಕೊಳ್ಳಲು ಕ್ರಮ ಜರುಗಿಸಲಾಗುತ್ತದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನಕ್ಕೆ ಮಹಾನಗರ ಪಾಲಿಕೆಯಿಂದ ಸರ್ವ ಸೌಲಭ್ಯ ನೀಡಲಾಗುವುದು ಎಂದು ಅವರು ತಿಳಿಸಿದರು.
ನಾನು ಕಳೆದ 11 ವರ್ಷ ಅವಧಿಯಲ್ಲಿ ಚಿತ್ರದುರ್ಗ, ಮಡಿಕೇರಿ, ಮೈಸೂರು, ತುಮಕೂರು, ರಾಮನಗರ, ಕನಕಪುರ ಮುಂತಾದ ಕಡೆ ಕೆಲಸ ಮಾಡಿದ್ದು ಇದೀಗ ಉತ್ತರ ಕರ್ನಾಟಕದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಕೆಲಸ ಮಾಡುವ ಯೋಗ ಸಿಕ್ಕಿರುವುದು ನನ್ನ ಪಾಲಿನ ಸೌಭಾಗ್ಯವಾಗಿದೆ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು.
ಕನ್ನಡ ನಾಮಫಲಕ ಖಡ್ಡಾಯ: ಪಾಲಿಕೆ ಆಯುಕ್ತೆ
