ಬೆಳಗಾವಿ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ 625ಕ್ಕೆ 625 ಅಂಕ ಗಳಿಸುವ ಮೂಲಕ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ.
ರೂಪಾ ಪಾಟೀಲ ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ. ಇಂದು ಫಲಿತಾಂಶ ಪ್ರಕಟವಾದಾಗ ರೂಪಾ ತಮ್ಮ ಅಜ್ಜಿ ಊರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಕಬನೂರ ಗ್ರಾಮದಲ್ಲಿ ಇದ್ದರು. ಅಜ್ಜಿ ಮನೆಯಲ್ಲಿ ಸಂಭ್ರಮಾಚರಣೆ ಮಾಡಿದರು. ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು.
ರೂಪಾ ತಂದೆ ಚನಗೌಡ ರೈತರಾಗಿದ್ದು, ತಾಯಿ ಲತಾ ಗೃಹಿಣಿ ಆಗಿದ್ದಾರೆ. ತಂದೆ ಐಟಿಐ, ತಾಯಿ ಪಿಯುಸಿ ಓದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳು. ರೂಪಾ ಅಕ್ಕ ವೈಷ್ಣವಿ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಶೇ. 90ರಷ್ಟು ಅಂಕ ಗಳಿಸಿದ್ದರು. ಸಹೋದರ ಸಮರ್ಥಗೌಡ 6ನೇ ತರಗತಿ ಓದುತ್ತಿದ್ದಾನೆ. ಮಗಳ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿನಿಧಿ ಎಸ್ಎಸ್ಎಲ್ಸಿ ಟಾಪರ್ ರೂಪಾ ಅವರನ್ನು ಸಂಪರ್ಕಿಸಿದಾಗ ಸಂತಸ ವ್ಯಕ್ತಪಡಿಸಿದರು. ಶಾಲೆಯ ಅವಧಿ‌ ಬಿಟ್ಟು ಪ್ರತಿನಿತ್ಯ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ದಿನಕ್ಕೆ 5-6 ತಾಸ ಓದುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹ ಸಾಕಷ್ಟಿತ್ತು. ಅಪ್ಪ-ಅವ್ವ ನನಗೆ ಓದಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಕಂಠ ಪಾಠಕ್ಕಿಂತ ಅರ್ಥ ಮಾಡಿಕೊಂಡು ಓದಿದರೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. ಮುಂದೆ ವೈದ್ಯೆ ಆಗುವ ಗುರಿ ಇಟ್ಟುಕೊಂಡಿದ್ದೇನೆ. ಅಪ್ಪ-ಅವ್ವ ಸೇರಿ ಅಜ್ಜಿ ಮನೆಯವರಿಗೆಲ್ಲಾ ತುಂಬಾ ಖುಷಿಯಾಗಿದೆ ಎಂದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ವರ್ಷ 25ನೇ ಸ್ಥಾನ ಗಳಿಸಿದೆ. ಕಳೆದ ವರ್ಷ 29ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.