ಬೆಳಗಾವಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗೃಹ ಆರೋಗ್ಯ ಮತ್ತು ಆಶಾ ಕಿರಣ ಎಂಬ ಎರಡು ನೂತನ ಯೋಜನೆಗಳನ್ನು ಆರಂಭಿಸುತ್ತಿದೆ. ಪ್ರತಿಯೊಬ್ಬರ ಆರೋಗ್ಯ ತಪಾಸಣೆಗಾಗಿ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸುವ ಗೃಹ ಆರೋಗ್ಯ ಯೋಜನೆ ಮತ್ತು ಆಶಾಕಿರಣ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರಿಂದಿಲ್ಲಿ ತಿಳಿಸಿದರು.
ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಆರೋಗ್ಯ ಯೋಜನೆಗೆ ಬೆಳಗಾವಿ, ಗದಗ ಸೇರಿ ರಾಜ್ಯದ 8 ಜಿಲ್ಲೆಗಳು. ಆಶಾಕಿರಣ ಯೋಜನೆಯನ್ನು ಹಾವೇರಿ ಮತ್ತು ಉತ್ತರ ಕನ್ನಡ ಸೇರಿ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿದ್ದೇವೆ. ರೋಗಗಳನ್ನು ಪತ್ತೆ ಹಚ್ಚಿ ಮನೆಗೆ ಔಷಧಿಯನ್ನೂ ಕೂಡ ವಿತರಿಸುತ್ತೇವೆ ಎಂದರು.
ಜಿಲ್ಲಾ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು, ಎಂಬಿಬಿಎಸ್ ವೈದ್ಯರ ಕೆಲಸದ ಮೇಲೆ ನಿಗಾ ಇಟ್ಟಿದ್ದೇವೆ. ಅವರಿಗೆಲ್ಲಾ ಇ-ಹಾಜರಾತಿ ಕಡ್ಡಾಯಗೊಳಿಸಿದ್ದೇವೆ. ಆಸ್ಪತ್ರೆಯಲ್ಲಿ ಕೆಲಸದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರೆ ಅಂತಹ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಡೆಂಗ್ಯೂ ಕೇಸ್ ಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಜಾಸ್ತಿ ಕೇಸ್ ಗಳು ದಾಖಲಾಗಿಲ್ಲ. ಆದರೆ, ಈ ತಿಂಗಳು ಮತ್ತು ಮುಂದಿನ ತಿಂಗಳು ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗ ಮಳೆ ಕೂಡ ಬರುತ್ತಿರುವುದರಿಂದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಡೆಂಗ್ಯೂ ಹರಡುವ ಸಾಧ್ಯತೆಯಿದೆ. ಹಾಗಾಗಿ, ಎಚ್ಚರ ವಹಿಸುವ ಅವಶ್ಯಕತೆಯಿದೆ ಎಂದರು.
ಎಲ್ಲಾ ಜಿಲ್ಲಾಸ್ಪತ್ರೆಗಳು ಮತ್ತು ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಬ್ರೇನ್ ಹೆಲ್ತ್ ಇನಿಸಿಯೇಟಿವ್(ಕಭಿ) ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. ಟೆಲಿ ಸಂದರ್ಶನ ಮೂಲಕ ಮಾನಸಿಕ ಅಸ್ವಸ್ತರು ತಜ್ಞರಿಂದ ಸೂಕ್ತ ಸಲಹೆ, ಮಾರ್ಗದರ್ಶನ, ಪರಿಹಾರ ಪಡೆಯಬಹುದಾಗಿದೆ. ಅಲ್ಲದೇ ಮುಂದಿನ ಚಿಕಿತ್ಸೆ ಕುರಿತು ಅವರಿಗೆ ತಿಳಿಸುತ್ತಾರೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.
104 ಸಹಾಯವಾಣಿ ಮತ್ತೆ ಆರಂಭ:
ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳಿಗೆ ಎಂ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಸೇವೆ ಸರಿಯಾಗಿ ಲಭ್ಯವಾಗುತ್ತಿಲ್ಲ. ನಿರ್ವಹಣೆ ಕೊರತೆ ಸೇರಿ ಇತರೆ ಕಾರಣಗಳಿಂದ ಕೆಲವು ಕಡೆ ಬಂದ್ ಆಗಿವೆ. ಹಾಗಾಗಿ, ಅವುಗಳ ನಿರ್ವಹಣೆ, ದಿನದ 24 ಗಂಟೆಗಳ ಸೇವೆಗಾಗಿ ಹೊಸ ಏಜೆನ್ಸಿಗಳಿಗೆ ಟೆಂಡರ್ ನೀಡುತ್ತೇವೆ. ಇನ್ನು ಅವಶ್ಯಕತೆ ಇರುವ ಕಡೆಗಳಲ್ಲಿ ಹೊಸದಾಗಿ ಎಂಆರ್ ಐ ಮತ್ತು ಸಿಟಿ ಸ್ಕ್ಯಾನ್ ಆರಂಭಿಸಲಾಗುವುದು. ಮುಂದಿನ 4 ತಿಂಗಳಲ್ಲಿ ಅವು ಕಾರ್ಯಾರಂಭ ಮಾಡಲಿವೆ. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗುತ್ತಿದೆ. 104 ಸಹಾಯವಾಣಿ ಮರು ಆರಂಭಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದರು..