ಬೆಳಗಾವಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ಮೋಟರ್ ವೈಂಡಿಂಗ್ ಅಂಗಡಿ ಕೆಲಸ ಮಾಡುವವನ ಮಗಳು ರಾಜ್ಯಕ್ಕೆ 3ನೇ ರ್ಯಾಂಕ್, ತಂದೆ ಇಲ್ಲದ ತಾಯಿ ಆಶ್ರಯದಲ್ಲೆ ಬೆಳೆದ ಚಿಕ್ಕೋಡಿ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಬರುವ ಮೂಲಕ ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಇಬ್ಬರೂ ಹೆಚ್ಚಿಸಿದ್ದಾರೆ.
ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ತನ್ವಿ ಹೇಮಂತ ಪಾಟೀಲ ಒಟ್ಟು 600 ಅಂಕಗಳ ಪೈಕಿ ತನ್ವಿ ಪಾಟೀಲ 597 ಅಂಕ ಪಡೆದಿದ್ದಾರೆ. ಇಂಗ್ಲೀಷ 97, ಹಿಂದಿ 100, ಅರ್ಥಶಾಸ್ತ್ರ 100, ಲೆಕ್ಕಶಾಸ್ತ್ರ 100, ವ್ಯವಹಾರ ಅಧ್ಯಯನ 100, ಸಂಖ್ಯಾಶಾಸ್ತ್ರ 100 ಅಂಕ ಗಳಿಸಿದ್ದಾರೆ.‌ ರಾಜ್ಯಕ್ಕೆ ಮೂರನೇ ಸ್ಥಾನ ಬಂದ ಸುದ್ದಿ ತಿಳಿಯುತ್ತಿದ್ದಂತೆ ತನ್ವಿ ತಂದೆ-ತಾಯಿ ಮತ್ತು ಕಾಲೇಜು ಪ್ರಾಧ್ಯಾಪಕರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಹಿ ತಿನ್ನಿಸಿ ಸಂಭ್ರಮಿಸಿದರು.
ತನ್ವಿ ಅವರದ್ದು ಮಧ್ಯಮವರ್ಗದ ಕುಟುಂಬ. ತಂದೆ ಹೇಮಂತ ಅವರು ಮೋಟರ್ ವೈಂಡಿಂಗ್ ಅಂಗಡಿ ಇಟ್ಟುಕೊಂಡಿದ್ದಾರೆ. ತಾಯಿ ಸಂಗೀತಾ ಮನೆಗೆಲಸ ಮಾಡುತ್ತಾರೆ. ಸಹೋದರ ಬಿಕಾಂ ಪದವಿ ಓದುತ್ತಿದ್ದಾನೆ. ಎಸ್ಎಸ್ಎಲ್ಸಿಯಲ್ಲೂ ತನ್ವಿ ಶೇ.98.88 ಅಂಕ ಗಳಿಸಿದ್ದರು. ಈಗ ಪಿಯುಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಬಂದಿರುವುದು ಆಕೆಯ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.
ತನ್ವಿ ಪಾಟೀಲ ಮಾತನಾಡಿ ನನಗೆ ತುಂಬಾ ಸಂತೋಷ ಆಗುತ್ತಿದೆ. ದೇವರು ನಾನು ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ನೀಡಿದ್ದಾನೆ. ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ರ್ಯಾಂಕ್ ಬರುವ ಆಸೆ ಹೊಂದಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಹಾಗಾಗಿ, ಪಿಯುಸಿ ಪ್ರಥಮ ವರ್ಷಕ್ಕೆ ಕಾಲೇಜಿಗೆ ಬಂದ ಮೊದಲ ದಿನವೇ ನಾನು ರಾಜ್ಯಕ್ಕೆ ರ್ಯಾಂಕ್ ಬರಬೇಕು ಎಂದು ನಿಶ್ಚಯಿಸಿದೆ. ಗುರಿ ಮುಟ್ಟುವವರೆಗೂ ನಿರಂತರವಾಗಿ ಓದಿದೆ. ಇಂದು ನನ್ನ ಕನಸು ಸಾಕಾರವಾಗಿದೆ. ಮಾತನಾಡಲು ಬಾಯಲ್ಲಿ ಪದಗಳೇ ಬರುತ್ತಿಲ್ಲ. ತಂದೆ-ತಾಯಿ, ಕಾಲೇಜಿನ ಪ್ರಿನ್ಸಿಪಾಲ್, ಪ್ರಾಧ್ಯಾಪಕರ ಸಹಕಾರಕ್ಕೆ ಅದೇಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಮುಂದೆ ಸಿಎ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಮನೆಯಲ್ಲಿ ಬಡತನ ಇದ್ದರಿಂದ ನಮ್ಮ ತಂದೆ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಆಗಲಿಲ್ಲ.‌ ಹಾಗಾಗಿ, ತಾನು ವಿದ್ಯೆಯಿಂದ ವಂಚಿತ ಆದಂತೆ ನನ್ನ ಮಕ್ಕಳು ಆಗಬಾರದು ಎಂಬ ಉದ್ದೇಶದಿಂದ ಕಷ್ಟ ಪಟ್ಟು ಓದಿಸುತ್ತಿದ್ದಾರೆ‌. ಅದನ್ನು ತಲೆಯಲ್ಲಿ ಇಟ್ಟುಕೊಂಡು ಪ್ರತಿದಿನದ ಅಭ್ಯಾಸ ಅವತ್ತೆ ಮುಗಿಸುತ್ತಿದ್ದೆ. ಇಷ್ಟೇ ಗಂಟೆ ಓದಬೇಕು ಅಂತಾ ಇರಲಿಲ್ಲ. ಬಹಳಷ್ಟು ದಿನ ಕಡಿಮೆ ನಿದ್ದೆ ಮಾಡಿ ಓದುತ್ತಿದ್ದೆ. ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದರು. ಜೀವನದಲ್ಲಿ ಯಾವುದೂ ಸಾಧ್ಯವಿಲ್ಲ ಅಂತಾ ಇಲ್ಲ. ಪರಿಶ್ರಮ ಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಎನ್ನುತ್ತಿದ್ದರು. ಆದ್ದರಿಂದ ಎಲ್ಲರೂ ಶಿಕ್ಷಕರ ಪಾಠವನ್ನು ಲಕ್ಷ ವಹಿಸಿ ಕೇಳಿ, ಮನೆಗೆ ಬಂದು ಪುನಃ ಓದಬೇಕು. ಸಮಯವನ್ನು ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ತನ್ವಿ ಪಾಟೀಲ್.
ತನ್ವಿ ತಾಯಿ ಸಂಗೀತಾ ಮಾತನಾಡಿ, ರಾಜ್ಯಕ್ಕೆ ನಮ್ಮ ಮಗಳು ರ್ಯಾಂಕ್ ಬರಬೇಕು ಎನ್ನುವುದು ನಮ್ಮ ಕನಸಾಗಿತ್ತು. ಅದನ್ನು ಇಂದು ಈಡೇರಿಸಿದ್ದಾಳೆ. ನಿದ್ದೆ ಬಿಟ್ಟು ಬೆಳಗಿನ 4ರವರೆಗೂ ಓದುತ್ತಿದ್ದಳು. ಅದರಿಂದ ಅಭ್ಯಾಸ ಮಾಡುವುದು ಬಿಡು ಎನ್ನುತ್ತಿದ್ದೇವು. ಆದರೂ ಆಕೆ ಬಿಡುತ್ತಿರಲಿಲ್ಲ. ನಮ್ಮ ಮಗಳ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. ಬಹಳಷ್ಟು ಖುಷಿ ಆಗುತ್ತಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಎಂ.ಕಾಂಬಳೆ, ತನ್ವಿ ಪಾಟೀಲ ಶ್ರಮ, ತಂದೆ-ತಾಯಿ ಸಹಕಾರ ಮತ್ತು ಕಾಲೇಜು ಉಪನ್ಯಾಸಕರ ಮಾರ್ಗದರ್ಶನದಿಂದ ರಾಜ್ಯಕ್ಕೆ 3ನೇ ಸ್ಥಾನ ಬಂದಿರುವುದು ಬಹಳಷ್ಟು ಖುಷಿ ತಂದಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆ ಈ ವರ್ಷ 26ನೇ ಸ್ಥಾನ ಬಂದಿದೆ. ಶೇ. 65.35 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ 27ನೇ ಸ್ಥಾನ ಬಂದಿತ್ತು. ಈಗ ಒಂದು ಸ್ಥಾನ ಹೆಚ್ಚಾಗಿದೆ ಎಂದರು.
ಡಾ.ಅಂಜನಾ ಕೇರೂರ ಮಾತನಾಡಿ, ನಮಗೆ ಹೆಮ್ಮೆಯ ವಿಷಯ. ಆಡಳಿತ ಮಂಡಳಿ, ಶಿಕ್ಷಕ ವೃಂದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಮೊದಲೇ ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವು‌. ಅದನ್ನು ಸಾಕಾರಗೊಳಿಸಿರುವ ತನ್ವಿ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 20,995 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 13,724 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಕಲೆ ವಿಭಾಗದಲ್ಲಿ 7,260 ಪೈಕಿ 3,954 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 54.46 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 6,461 ವಿದ್ಯಾರ್ಥಿಗಳ ಪೈಕಿ 4,340 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಶೇ. 67.17 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 7,274 ಪೈಕಿ 5,430 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 74.65 ಫಲಿತಾಂಶ ದಾಖಲಾಗಿದೆ. ಅದೇರೀತಿ ಗ್ರಾಮೀಣ ಭಾಗದ 5,178 ವಿದ್ಯಾರ್ಥಿಗಳಲ್ಲಿ 3003 ಪಾಸ್ ಆಗಿದ್ದು, ಶೇ.58 ಫಲಿತಾಂಶ ಬಂದಿದೆ. ನಗರ ಪ್ರದೇಶದಲ್ಲಿ 15,817 ವಿದ್ಯಾರ್ಥಿಗಳಲ್ಲಿ 10,721 ಉತ್ತೀರ್ಣರಾಗಿದ್ದರೆ, ಶೇ.67.78ರಷ್ಟು ಫಲಿತಾಂಶ ದಾಖಲಾಗಿದೆ. 12,500 ವಿದ್ಯಾರ್ಥಿನಿಯರ ಪೈಕಿ, 8821 ಉತ್ತೀರ್ಣರಾಗಿ, ಶೇ. 70.57 ಫಲಿತಾಂಶ ದಾಖಲು ಆಗಿದೆ. 10396 ವಿದ್ಯಾರ್ಥಿಗಳ ಪೈಕಿ 5,175 ಪಾಸ್ ಆಗಿದ್ದು, ಶೇ‌.49.78 ಫಲಿತಾಂಶ ದಾಖಲಾಗಿದೆ.
ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ 4ನೇ ರ್ಯಾಂಕ್:
ಅದೇ ರೀತಿ ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಪವಡಿ ಅಮಲ್ಲಾಪುರೆ 600 ಅಂಕಗಳ ಪೈಕಿ 594 ಅಂಕ ಗಳಿಸಿದ್ದು, ರಾಜ್ಯಕ್ಕೆ 4ನೇ ರ್ಯಾಂಕ್ ಬಂದಿದ್ದಾರೆ. ಕನ್ನಡ 99, ಇಂಗ್ಲೀಷ 97, ಇತಿಹಾಸ 99, ಅರ್ಥಶಾಸ್ತ್ರ 100, ಸಮಾಜಶಾಸ್ತ್ರ 100, ರಾಜ್ಯಶಾಸ್ತ್ರ 99 ಅಂಕ ಗಳಿಸಿದ್ದಾರೆ‌. ಕಾವೇರಿ ಒಂದು ವರ್ಷವಿದ್ದಾಗ ತಂದೆ ಪವಡಿ ಮೃತರಾಗಿದ್ದರು. ಆಗಿನಿಂದ ತಾಯಿ ಕೂಲಿನಾಲಿ ಮಾಡಿ ತನ್ನ ಮೂವರು ಮಕ್ಕಳನ್ನು ಸಲುಹಿದ್ದರು. ಇಬ್ಬರು ಗಂಡು ಮಕ್ಕಳನ್ನು ಪದವಿವರೆಗೂ ಓದಿಸಿದ್ದಾರೆ. ಈಗ ಮಗಳು ರಾಜ್ಯಕ್ಕೆ 4ನೇ ಸ್ಥಾನ ಬಂದಿರೋದು ತಾಯಿ ಕಷ್ಟಕ್ಕೆ ಬೆಲೆ ಸಿಕ್ಕಂತಾಗಿದೆ.
ವಿದ್ಯಾರ್ಥಿನಿ ಕಾವೇರಿ ಮಾತನಾಡಿ, ನನಗೆ ಬಹಳ ಸಂತೋಷ ಆಗುತ್ತಿದೆ. ನನ್ನ ತಾಯಿ ಪಟ್ಟ ಕಷ್ಟ ಸಾರ್ಥಕವಾಯಿತು. ಶೇ‌.97 ರಷ್ಟು ಎಸ್ಎಸ್ಎಲ್ಸಿ ಫಲಿತಾಂಶ ಬಂದಿತ್ತು. ಪಿಯುಸಿ ಪ್ರಥಮ ವರ್ಷ ಮಜಲಟ್ಟಿ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದೆ. ಆಗ ಹಾಸ್ಟೇಲ್ ಸಿಗಲಿಲ್ಲ. ಪ್ರಥಮ ವರ್ಷದಲ್ಲಿ ಶೇ.99 ಅಂಕ ಬಂದವು. ಬಳಿಕ ಹಾಸ್ಟೇಲ್ ಸಿಕ್ಕಿತು. ಜಾಸ್ತಿ ಸಮಯ ಓದುತ್ತಿರಲಿಲ್ಲ. ಪರೀಕ್ಷೆಗೆ ಎಷ್ಟು ಬೇಕು ಅಷ್ಟು ಓದುತ್ತಿದ್ದೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಗುರಿ ಹೊಂದಿದ್ದೇನೆ ಎಂದರು.