ಬೆಳಗಾವಿ: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ “ಭಾರತ ಹುಣ್ಣಿಮೆ” ನಿಮಿತ್ತ ಅದ್ಧೂರಿ ಜಾತ್ರೆ ನೆರವೇರುತ್ತಿದೆ. ಉತ್ತರಕರ್ನಾಟಕದ ಶಕ್ತಿದೇವತೆ ಯಲ್ಲಮ್ಮದೇವಿ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದ್ದು, ಉಧೋ… ಉಧೋ… ಯಲ್ಲಮ್ಮ ನಿನ್ಹಾಲ್ಕ ಉಧೋ..ಘೋಷವಾಕ್ಯ ಲಕ್ಷ ಲಕ್ಷ ಭಕ್ತರಿಂದ ಮೊಳಗಿತು.
ಏಳುಕೊಳ್ಳದ ನಾಡು ಯಲ್ಲಮ್ಮನ ಗುಡ್ಡ ಬುಧವಾರ ಅಕ್ಷರಶಃ ಜನಜಾತ್ರೆಯ ಸ್ವರೂಪ ಪಡೆದಿತ್ತು. ಕಣ್ಣು ಹಾಯಿಸಿದಲ್ಲಿ ಎಲ್ಲಾ ಜನವೋ ಜನ. ಚಕ್ಕಡಿ, ಟ್ರ್ಯಾಕ್ಟರ್ ಗಳ ಸಾಲು, ಜೋಗತಿಯರ ಚೌಡಕಿ ಹಾಡು-ಕುಣಿತ, ಭಾರತ ಹುಣ್ಣಿಮೆ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಮಲಪ್ರಭೆ ದಡದಲ್ಲಿರುವ ಜೋಗುಳಬಾವಿ ಹಾಗೂ ಎಣ್ಣೆ ಹೊಂಡದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರು, ಹೊಸ ಬಟ್ಟೆ ಧರಿಸಿ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ಪುನೀತರಾದರು. ಇನ್ನು ರಸ್ತೆ ಬದಿಗಳಲ್ಲೇ ಕಡಬು, ಹೋಳಿಗೆ, ವಡೆ, ಕರ್ಚಿಕಾಯಿ ಸೇರಿದಂತೆ ತರಹೇವಾರಿ ತಿಂಡಿಗಳನ್ನು ಇಟ್ಟು ಹಡ್ಡಲಗಿ (ಪರಡಿ) ತುಂಬಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ ದೇವಿಗೆ ನೈವೇದ್ಯ ಅರ್ಪಿಸಿ ಕೃತಾರ್ಥರಾದರು.
ಕರ್ನಾಟಕ ಅಲ್ಲದೇ ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ಮತ್ತಿತರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಗುಡ್ಡಕ್ಕೆ ಬಂದಿದ್ದರು. ಬೆಳಗಿನ ಜಾವದಿಂದಲೇ ದೇವಿ ದರ್ಶನ ಆರಂಭವಾಗಿತ್ತು. ಭಕ್ತರು ಯಲ್ಲಮ್ಮ ತಾಯಿಗೆ ಜೈಕಾರ ಕೂಗಿ, ದೇವಸ್ಥಾನಕ್ಕೆ ಭಂಡಾರ ಹಾರಿಸಿ ಸಂಭ್ರಮಿಸುವುದು ಸಾಮಾನ್ಯವಾಗಿತ್ತು. ಭಕ್ತರು ಭಂಡಾರದಲ್ಲಿ ಮಿಂದೆದ್ದಿದ್ದು ಭಕ್ತಿಯ ಹೊಳೆ ಹರಿಸಿದರು.