ಬೆಳಗಾವಿ: ಆಧುನಿಕತೆಯಯಲ್ಲಿಯೂ ಕೂಡ ಮೂಡನಂಬಿಕೆಯಿಂದಾಗಿ ದೇಹದಾನ ಮತ್ತು ಅಂಗಾಂಗ ದಾನ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸಮಾಜದಲ್ಲಿ ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಪರ ಮತ್ತು ವಿರೋಧ ಇದ್ದೆ ಇರುತ್ತದೆ. ಶರೀರವು ನಶ್ವರವಾಗಿದ್ದು, ಇದನ್ನು ಮಣ್ಣು ಮಾಡಿ ಕೊಳೆಸುವದಕ್ಕಿಂತ ದೇಹದಾನ ಮಾಡಿ ವೈದ್ಯವಿದ್ಯಾರ್ಥಿಗಳಿಗೆ ಕಲಿಯಲು ಸಹಕರಿಸಬೇಕು ಮತ್ತು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮಿಗಳು ಸಲಹೆ ನೀಡಿದರು.
ಕಾಹೆರನ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ದೇಹದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ನಾನೂ ದೇಹದಾನ ಮಾಡಬೇಕೆಂಬ ಮನೋಭಾವನೆ ಇರಬೇಕು. ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ವಾಮಿಜಿಯಾಗಿ ನಾನೂ ಕೂಡ ಜನುಮ ದಿನದಂದೇ ದೇಹದಾನ ಮಾಡುವ ನಿರ್ಧಾರ ತೆಗೆದುಕೊಂಡಾಗ ಹಲವರು ಹೊಗಳಿದರೆ ಕೆಲವರು ತೆಗಳಿದರು. ಆದರೆ ಸಮಾಜಕ್ಕೆ ಇದರಿಂದ ಒಳ್ಳೆಯದಾಗುತ್ತದೆ ಎಂಬ ಸಂದೇಶ ನೀಡಿಯಾಗಿದೆ. ಆದ್ದರಿಂದ ಕುಟುಂಬದೊಂದಿಗೆ ಚರ್ಚಿಸಿ ದೇಹದಾನ ಅಥವಾ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಳ್ಳಿ ಎಂದರು.
ಜೆಎನ್ಎಂಸಿ ಉಪಪ್ರಾಚರ್ಯರಾದ ಡಾ. ವಿಶ್ವನಾಥ ಪಟ್ಟಣಶೆಟ್ಟಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವ ಅಂಗಾಂಗಗಳ ವೈಫಲ್ಯ ತೀವ್ರಗತಿಯಲ್ಲಿ ಕಂಡುಬರುತ್ತಿದೆ. ಅವರ ಜೀವನ ದುಸ್ತರವಾಗುತ್ತಿದ್ದು, ಅರ್ಥಿಕವಾಗಿಯೂ ದುರ್ಬಲರಾಗುತ್ತಿದ್ದಾರೆ. ಕಿಡ್ನಿ ದಾನ ಮಾಡಿದಂತೆ ಹೃದಯ, ಲಂಗ, ಲೀವರ, ಪಾನಕ್ರಿಯಾ ಸೇರಿದಂತೆ ವಿವಿಧ ಅಂಗಗಳನ್ನು ದಾನ ಮಾಡಬೇಕು. ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡು ಜೀವಂತ ಶವವಾಗಿರುವ ವ್ಯಕ್ತಿಯ ಅಂಗಗಳನ್ನು ಬೇರೊಬ್ಬರಿಗೆ ಕಸಿ ಮಾಡಿ ಅವರ ಜೀವ ಉಳಿಸಬಹುದು. ಆತ ನೀಡುವ ಅಂಗಾಂಗಳಿಂದ 8 ಜನರ ಜೀವ ಉಳಿಸಬಹುದು ಎಂದು ವಿವರಿಸಿದರು.
ಸಮಾಜ ಸೇವಕ ವಿಜಯ ಮೋರೆ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಆರಿಫ್ ಮಾಲ್ದಾರ, ಡಾ. ರಾಮಣ್ಣವರ ಟ್ರಸ್ಟನ ಡಾ. ಮಹಾಂತೇಶ ರಾಮಣ್ಣವರ ಮಾತನಾಡಿದರು. ಡಾ. ಶೀತಲ ಪಟ್ಟಣಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರೆ, ಡಾ.ರಚನಾ ಕುಲಕರ್ಣಿ ಹಾಗೂ ಮಹಾಂತೇಶ ಇಳಕಲ್ ನಿರೂಪಿಸಿದರು. ಡಾ. ಶಿಲ್ಪಾ ಭೀಮಳ್ಳಿ ವಂದಿಸಿದರು.