ಬೆಳಗಾವಿ: ‘ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆ ಜಾರಿಗೊಳಿಸಿದೆ. ಉದ್ಯೋಗಿಗಳು, ಉದ್ಯಮಿಗಳು, ಪಾಲಕರು ಮತ್ತು ಹಳೆ ವಿದ್ಯಾರ್ಥಿಗಳು ಉದಾರ ದೇಣಿಗೆ ನೀಡಿ ಪ್ರಗತಿಯ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಲಾಂಛನ ಅನಾವರಣ, ದಾನಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿವೆ. 56 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪಿಯು ವಿದ್ಯಾರ್ಥಿಗಳೂ ಸೇರಿ ಒಟ್ಟು 1.05 ಕೋಟಿ ವಿದ್ಯಾರ್ಥಿಗಳಿದ್ದಾರೆ. ಕಳೆದ ದಶಕಗಳಲ್ಲಿ ಇಲ್ಲಿ ಕಲಿತು ಹೋದವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಅವರು ತಾವು ಕಲಿತ ಶಾಲೆಗಳಿಗೆ ಮರಳಬೇಕು. ಕನಿಷ್ಠ ₹ 5 ಸಾವಿರ ದೇಣಿಗೆ ನೀಡಬೇಕು ಅಥವಾ ಇಷ್ಟವಾದದ್ದನ್ನು ಕೊಡುಗೆ ಕೊಡಬೇಕು. ಇದರಿಂದ ಸರ್ಕಾರಿ ಶಾಲೆಗಳ ಚಿತ್ರಣವೇ ಬದಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಜನರ ಸಹಭಾಗಿತ್ವದಿಂದ ಶಿಕ್ಷಣ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ತರಲಾಗಿದೆ. 7ನೇ ವೇತನ ಆಯೋಗ ಜಾರಿಯಾದ ತಕ್ಷಣ ಶಿಕ್ಷಕರೆಲ್ಲ ತಮ್ಮ ಒಂದು ತಿಂಗಳ ವೇತನವನ್ನು ಈ ಯೋಜನೆಗೆ ನೀಡಬೇಕು. ಸುಮಾರು 31 ಸಾವಿರ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಕಟ್ಟಲಾಗಿದೆ. ವಾಟ್ಸ್ಆ್ಯಪ್ ಗ್ರೂಪುಗಳಲ್ಲಿ ಸೇರಿಸಲಾಗಿದೆ. ಈಗಾಗಲೇ ಕೆಲವರು ಲಕ್ಷಗಟ್ಟಲೇ ದಾನ ನೀಡಿದ್ದಾರೆ’ ಎಂದು ಹೇಳಿದರು.
‘ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಾವುರು ಕಲಿತ ಸಿದ್ದರಾಮನಹುಂಡಿಯ ಸರ್ಕಾರಿ ಶಾಲೆಗೆ ₹ 10 ಲಕ್ಷ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರು ಕಲಿತ ಶಾಲೆಗೆ ನಾನು ₹10 ಲಕ್ಷ ದೇಣಿಗೆ ನೀಡಿದ್ದೇನೆ. ಹಲವು ಶಾಸಕರೂ ಇಂಥ ಕೆಲಸಕ್ಕೆ ಮುಂದಾಗಿದ್ದಾರೆ. ಇದೊಂದು ಕ್ರಾಂತಿಕಾರಕ ನಡೆಯಾಗಬೇಕು ಎಂದು ತಿಳಿಸಿದರು.
ಲಾಂಛನ ಅನಾವರಣಗೊಳಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು, ಇದು ಸರ್ಕಾರದ ಯೋಜನೆ ಮಾತ್ರವಲ್ಲ. ಪ್ರತಿಯೊಬ್ಬ ಶಿಕ್ಷಕ, ಪಾಲಕ, ಇಲಾಖೆಯ ಅಧಿಕಾರಿಗಳು ಜವಾಬ್ದಾರರು ಎಂದ ಅವರು,ಧಾರ್ಮಿಕ ಕಾರ್ಯಗಳಿಗೆ ಹುಡುಕಿಕೊಂಡು ಹೋಗಿ ದೇಣಿಗೆ ಕೊಡುತ್ತೀರಿ. ಸರ್ಕಾರಿ ಶಾಲೆಗಳಿಗೆ ಕೊಟ್ಟು ನೋಡಿ; ದೇಶದ ಭವಿಷ್ಯ ಬದಲಾಗುತ್ತದೆ’ ಎಂದು ಹೇಳಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಧ್ಯಕ್ಷತೆ ವಹಿಸಿದ್ದರು. 45ಕ್ಕೂ ಹೆಚ್ಚು ದಾನಿಗಳನ್ನು ಸನ್ಮಾನಿಸಲಾಯಿತು.