ಬೆಳಗಾವಿ: ಕರ್ನಾಟಕ ಗೋವಾ ರಾಜ್ಯವನ್ನು ಬೆಸೆಯುವ ಪ್ರಮುಖ ಹೆದ್ದಾರಿಯಾಗಿರುವ ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ತೀವ್ರ ಹದಗೆಟ್ಟಿತ್ತು. ಅದರ ದುರಸ್ತಿ ಮತ್ತು ಅಬೀವೃದ್ದಿ ಮಾಡುವಂತೆ ಸಾರ್ವಜನಿಕವಾಗಿ ಸಾಕಷ್ಟು ಒತ್ತಡವಿತ್ತು. ಅದಕ್ಕನುಗುಣವಾಗಿ 43.35 ಕಿ.ಮೀ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು,11 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.

ಖಾನಾಪೂರ ತಾಲ್ಲೂಕಿನ ಕಣಕುಂಬಿ ಗ್ರಾಮದಲ್ಲಿ ಸುಮಾರು 58.90 ಕೋಟಿ ರೂ.ಗಳ ವೆಚ್ಚದಲ್ಲಿ ಗೋವಾ ರಾಜ್ಯದ ಗಡಿಯಿಂದ ಕಣಕುಂಬಿ ಕ್ರಾಸ್‌ ವರೆಗಿನ ಸುಮಾರು  43 ಕಿ.ಮೀ. ಉದ್ದದ ರಸ್ತೆಯ ಸುಧಾರಣೆ ಕಾಮಗಾರಿಗೆ  ಚಾಲನೆ ನೀಡಿ ಮಾತನಾಡಿದ ಅವರು, ಹೊಸ ರಸ್ತೆ ನಿರ್ಮಾಣದ ಜೊತೆಗೆ 10 ರಿಂದ 12 ಕಿಮೀ ರಸ್ತೆ ದುರಸ್ತಿ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗುವುದು. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅತಿ ವೇಗವಾಗಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಅರಣ್ಯ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಸಾಧ್ಯವಿಲ್ಲ ಎಂದು ಹೇಳಿದರು.

ಗೋಕಾಕ್ ಫಾಲ್ಸ್ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಹಾಗೂ ಬೆಳಗಾವಿ ನಗರದಲ್ಲಿ ಫ್ಲಾಯ್ ಓವರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಬಜೆಟನಲ್ಲಿ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದರು. 

ಶಾಸಕ ವಿಠ್ಠಲ ಹಲಗೇಕರ ಅವರು ಮಾತನಾಡಿದರು.

ಭೂಮಿ ಪೂಜೆ: ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರು ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.ಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. 

ಶಾಸಕರಾದ ಆಸೀಫ್ (ರಾಜು) ಸೇಠ್, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಮುಖ್ಯ ಇಂಜಿನಿಯರ್ ಸಿ.ಮಂಜಪ್ಪ, ಎಜುಕೆಟಿವ್ ಇಂಜಿನಿಯರ್ ಪಿ.  ರಾಜೇಂದ್ರ, ಬೆಳಗಾವಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಸೊಬರದ, ಕಣಕುಂಬಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಸೇರಿದಂತೆ ಕಣಕುಂಬಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.