ಬೆಳಗಾವಿ: ಜನ್ಮತಃವಾಗಿ ಸಿಂಡ್ಯಾಕ್ಟಿಲಿ ಎಂಬ ತೊಂದರೆಯಿಂದ ಕೈಬೆರಳುಗಳು ಕೂಡಿಕೊಂಡು ತೀವ್ರ ತೊಂದರೆ ಅನುಭವಿಸುತ್ತಿದ್ದ ಬಾಲಕಿಯ ಕೈ ಮತ್ತು ಬೆರಳುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಿ ಹೊಸ ಜೀವನ ನೀಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ಲಾಸ್ಟಿಕ್(ಸೌಂರ‍್ಯವರ್ಧಕ) ಮತ್ತು ಪುನರನಿರ್ಮಾಣ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ. ರಾಜೇಶ ಪವಾರ ಹಾಗೂ ಅವರ ತಂಡವು ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ಗ್ರಾಮದ ಕುಟುಂಬವು ಆರ್ಥಿಕ ತೊಂದರೆಯಿಂದಾಗಿ ಮಗುವಿನ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ತೊಂದರೆ ಪಡುತ್ತಿರುವದು ಕಂಡು ಬಂದಿತು. ಮೊದಲು ಸರಕಾರದ ಯೋಜನೆಗಳಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲು ಮುಂದಾದರೂ ಕೂಡ ಅದು ಪ್ರಯೋಜನಕ್ಕೆ ಬರಲಿಲ್ಲ. ತೀವ್ರ ಕಳವಳಗೊಂಡ ಕುಟುಂಬವು ನಂತರ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರನ್ನು ಸಂಪರ್ಕಿಸಿದಾಗ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ಅನುವು ಮಾಡಿಕೊಟ್ಟರು.
ಈಗಾಗಲೇ ಬಲಗೈ ಬೆರಳುಗಳನ್ನು ಬೇರ್ಪಡಿಸಲಾಗಿದ್ದು, ಶಸ್ತ್ರಚಿಕಿತ್ಸಾ ಪ್ರಕ್ರಿಯೆಯು ಹಂತ ಹಂತವಾಗಿ ಮುಂದುವರಿಯುತ್ತಿದ್ದು, ಎಡಗೈ ಬೆರಳುಗಳನ್ನು ಬಿಡುಗಡೆ ಮಾಡಲು ಮತ್ತು ಸರಿಪಡಿಸಲು ಎರಡು ತಿಂಗಳು ನಿಗದಿಪಡಿಸಲಾಗಿದೆ, ನಂತರ ಕಾಲ್ಬೆರಳುಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲ ಕಲ್ಪಿಸಿಕೊಟ್ಟ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಡಾ. ರಾಜೇಶ ಪವಾರ ಅವರಿಗೆ ಬಾಲಕಿಯ ಕುಟುಂಬಸ್ಥರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಜನ್ಮತಃ ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿರುವ ಮಕ್ಕಳ ಕುರಿತು ಅಪಾರ ಕಾಳಜಿ ಹೊಂದಿರುವ ಡಾ. ಕರೆ ಅವರು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಜೀವನದಲ್ಲಿ ಬದಲಾವಣೆ ತರಲು ಅತ್ಯಂತ ಕಾಳಜಿ ವಹಿಸುತ್ತಾರೆ.
ಕೂಡಿಕೊಂಡ ಕೈಗಳನ್ನು ಬೇರ್ಪಡಿಸಿದ ವೈದ್ಯರು
