ಬೆಳಗಾವಿ : ರಾಜ್ಯದಲ್ಲಿಯೇ ದೊಡ್ಡದಾದ ಜಿಲ್ಲೆಯನ್ನು ವಿಭಜಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕಳೆದ ಮೂರು ದಶಕಗಳಿಂದ ಕೂಗು ಕೇಳುತ್ತಿದೆ. ಆದರೆ ಇಲ್ಲಿನ ಒಳತಿಕ್ಕಾಟ ಹಾಗೂ ಗೊಂದಲಿದಿಂದ ಜಿಲ್ಲೆ ವಿಭಜನೆ ಕನಸು ಹಾಗೆ ಉಳಿದಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಆ ಕನಸು ನನಸಾಗುವ ಆಶಾಭಾವನೆ ಮೂಡಿದೆ. ಹಿಂದೆ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳ ರಚನೆಗೆ ಸರಕಾರ ನಿರ್ಣಯಿಸಿದಾಗ ಜಿಲ್ಲೆಯ ವಿವಿಧ ಕಡೆ ತೀವ್ರ ಪ್ರತಿರೋಧ ಉಂಟಾದಾಗ ಉದ್ದೇಶಿತ ಜಿಲ್ಲಾ ರಚನೆಯನ್ನು ಹಿಂಪಡೆಯಲಾಗಿತ್ತು.

ಬೆಳಗಾವಿ ಜಿಲ್ಲೆಯ ವಿಭಜನೆಗೆ ಕೊನೆಗೂ ಸಿದ್ದರಾಮಯ್ಯ ಸರಕಾರ ಮುಂದಡಿ ಇಟ್ಟಿದ್ದು, ಈ ಸಾಲಿನ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹಾಗೂ ಗೋಕಾಕ ನೂತನ ಜಿಲ್ಲೆಗಳನ್ನಾಗಿ ಘೋಷಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಖಚಿತ ಮೂಲಗಳ ಪ್ರಕಾರ, ಬೆಳಗಾವಿಯನ್ನು ಹಾಗೆಯೇ ಉಳಿಸಿ, ಚಿಕ್ಕೋಡಿ, ಗೋಕಾಕ ಗಳನ್ನು ಪ್ರತ್ಯೇಕ ಜಿಲ್ಲೆಗಳನ್ನಾಗಿ ವಿಭಾಗಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಗತ್ಯ ಮಾಹಿತಿ ನೀಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನ್ನವ‌ರ ಅವರಿಗೆ ಸೂಚಿಸಲಾಗಿದೆ.

ಬೆಳಗಾವಿಯಲ್ಲಿ ಹೊಸ ಜಿಲ್ಲೆ, ತಾಲೂಕುಗಳ ರಚನೆ ಕುರಿತ ವಿವಿಧ ಸಂಘಟನೆಗಳು ಹಾಗೂ ಕನ್ನಡ ಹೋರಾಟಗಾರರು ಸಲ್ಲಿಸಿರುವ ಮನವಿಗಳ ಆಧಾರದ ಮೇಲೆ ಸರಕಾರ ಕೇಳಿರುವ ಮಾಹಿತಿಯಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಡಳಿತಕ್ಕೆ ಈಗಾಗಲೇ ಮಾಹಿತಿ ಸಲ್ಲಿಸಿದ್ದು, ಸಮಗ್ರ ವರದಿಯನ್ನು ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ.

ಬೆಳಗಾವಿ ಜಿಲ್ಲಾ ವಿಭಜನೆ ಕೂಗು ಇಂದು ನಿನ್ನೆಯದ್ದಲ್ಲ. ಮೂರು ದಶಕಗಳಿಗಿಂತ ಹಿಂದಿನದ್ದು. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಅಥಣಿ ಜಿಲ್ಲೆಯನ್ನು ರಚಿಸಬೇಕು ಎಂಬ ಕೂಗು ಆಗಾಗ ಆಯಾ ಭಾಗದಿಂದ ಮೊಳಗುತ್ತಿದೆ. 1997 ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕಗಳನ್ನು ಕೇಂದ್ರೀಕರಿಸಿ ಹೊಸ ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದ್ದರು. ಆದರೆ, ಜಿಲ್ಲಾ ವಿಭಜನೆಯಿಂದ ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತದೆ ಎಂಬ ಕನ್ನಡ ಸಂಘಟನೆಗಳ ಒತ್ತಡದಿಂದ ಅಧಿಸೂಚನೆಯನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆದಿತ್ತು. ಇದೀಗ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ತವಕದಲ್ಲಿದೆ.