ಬೆಳಗಾವಿ: ಬೆಳಗಾವಿ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿರುವ ಹಲವು ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಶೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.
ಕಳೆದ ಜುಲೈ ತಿಂಗಳಿನಿಂದ ಸತತ ಸೂಚನೆ ನೀಡಿದ ನಂತರವೂ ಬೆಳಗಾವಿ ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಮುಖ್ಯಮಂತ್ರಿಗಳ ಬಳಿ ನಾವು ಏನೆಂದು ಉತ್ತರ ನೀಡುವುದು? ಎಂದು ಅವರು ಕಿಡಿಕಾರಿದರು.
ಮುಂದುವರೆದು, ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು, ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.
*ತಹಶೀಲ್ದಾರ್-ಎಸಿ ಕೋರ್ಟ್ ಕೇಸ್: ಸಚಿವರು ಗರಂ*
ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿನ ಎಲ್ಲಾ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಕಳೆದ ಜುಲೈ ನಿಂದ ಸೂಚಿಸುತ್ತಿದ್ದರೂ ಅಧಿಕ ಸಂಖ್ಯೆಯ ಪ್ರಕರಣಗಳ ಬಾಕಿ ಏಕೆ? ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.
ತಹಶೀಲ್ದಾರ್ ನ್ಯಾಯಾಲಯದಲ್ಲಿ 473 ಹಾಗೂ ಉಪವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿ 189 ಪ್ರಕರಣಗಳು ಬಾಕಿ ಇವೆ. 90 ದಿನಗಳ ಒಳಗಾಗಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಕಾನೂನು ಇದ್ದರೂ, ಈ ಎಲ್ಲಾ ಪ್ರಕರಣಗಳನ್ನು ಏಕೆ ಬಾಕಿ ಇಟ್ಟುಕೊಂಡಿದ್ದೀರ? ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಇ-ಆಫೀಸ್ ಬಳಸದ ಅಧಿಕಾರಿಗಳಿಗೆ ನೋಟೀಸ್*
ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಬೆಳಗಾವಿಯ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನವಾಗಿದೆ ಎಂದು ವರದಿ ನೀಡಿದ್ದೀರಿ. ಆದರೆ, ಇ-ಆಫೀಸ್ ನಲ್ಲಿ ಎಷ್ಟು ಫೈಲ್ ರಚಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಹಲವು ತಾಲೂಕುಗಳಲ್ಲಿ ಇ-ಆಫೀಸ್ ತೃಪ್ತಿದಾಯಕವಾಗಿಲ್ಲ ಎಂದು ಕಿಡಿಕಾರಿದರು.
ಇ-ಆಫೀಸನ್ನು ನಾವು ಶೋಕಿಗೆ ಜಾರಿ ಮಾಡಿಲ್ಲ. ಸರ್ಕಾರಿ ಸೇವೆ ಜನರಿಗೆ ಶೀಘ್ರವಾಗಿ ನೀಡುವ ಉದ್ದೇಶದಿಂದ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ತಹಶೀಲ್ದಾರ್ ಗಳೂ ಇನ್ಮುಂದೆ ಇ-ಆಫೀಸ್ ಮೂಲಕವೇ ಕಡತಗಳ ವಿಲೇವಾರಿ ನಡೆಸಬೇಕು. ಭೌತಿಕ ಕಡತಗಳನ್ನು ಸ್ವೀಕರಿಸಬಾರದು. ಟಪಾಲು ವಿಭಾಗದಲ್ಲೇ ಇ-ಆಫೀಸ್ ಬಳಕೆಯಾಗಬೇಕು. ಶೇ. 80ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ನಡೆಸದ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಶಾಸಕರಾ್ ರಾಜು ಕಾಗೆ, ಕಂದಾಯ ಆಯುಕ್ತರಾದ ಪಿ.ಸುನೀಲ್ ಕುಮಾರ್, ರೆವೆನ್ಯೂ ಆಯುಕ್ತರಾದ ಮಂಜುನಾಥ್, ಜಿಲ್ಲಾಧಿಕಾರಿಗಳಾದ ನಿತೇಶ ಕೆ. ಪಾಟೀಲ ಉಪಸ್ಥಿತರಿದ್ದರು.