ಬೆಳಗಾವಿ: ಜೂನ್ ನಲ್ಲಿ ಶೇ.68 ರಷ್ಟು ಕಡಿಮೆ ಮಳೆಯಾಗಿತ್ತು. ಜುಲೈ ತಿಂಗಳಿನಲ್ಲಿ ಶೇ.47ರಷ್ಟು ಹೆಚ್ಚಿನ ಮಳೆಯಾಗಿದೆ. ಎರಡೂ ತಿಂಗಳ ವಾಡಿಕೆಗಿಂತ ಶೇ.11 ರಷ್ಟು ಕಡಿಮೆ ಮಳೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ (ಜು.24) ನಡೆದ 2023-24 ನೇ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2.40 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದಾಗ ಪ್ರವಾಹ ಸಾಧ್ಯತೆ ಇರುತ್ತದೆ. ಸದ್ಯಕ್ಕೆ 1.14 ಲಕ್ಷ ಕ್ಯೂಸೆಕ್ ಒಳಹರಿವು ಇರುವುದರಿಂದ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು.
ವೇದಗಂಗಾ-ದೂಧಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಿನ ಪ್ರಮಾಣದಲ್ಲಿದೆ. ಈಗಾಗಲೇ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಗತ್ಯಬಿದ್ದರೆ ಕೂಡಲೇ ಜನರನ್ನು ಸ್ಥಳಾಂತರಿಸಲಾಗುವುದು.
ಜಿಲ್ಲೆಯಲ್ಲಿ ಇದುವರೆಗೆ ಶೇ.68ರಷ್ಟು ಬಿತ್ತನೆಯಾಗಿದೆ. ಹಿಂದಿನ ವರ್ಷಗಳಲ್ಲಿ ಮನೆಹಾನಿಯಾಗಿರುವ ಪ್ರಕರಣಗಳಲ್ಲಿ ಕಳೆದ ಎರಡು ತಿಂಗಳಲ್ಲಿ 52 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಬೆಳೆವಿಮೆ ಪರಿಹಾರ ನಿಗದಿಪಡಿಸುವಲ್ಲಿ ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ತಾರತಮ್ಯ ಮತ್ತು ಅಕ್ರಮಗಳನ್ನು ತಡೆಗಟ್ಟಲು ಕೃಷಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ 130 ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಸಂಬಂಧಿಸಿದಂತೆ ಹಳೆಯ ಪೈಪ್ ಲೈನ್, ಫೀಡರ್ ಚಾನೆಲ್ ಮತ್ತಿತರ ಕೆಲಸಗಳನ್ನು ಜಲಜೀವನ ಮಿಷನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಪಾವತಿಸಲು ಸರಕಾರ ಆದೇಶಿಸಿದೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭೋಯರ್ ತಿಳಿಸಿದರು.
ನರೇಗಾ ಯೋಜನೆಯಡಿ ಭವನಗಳ ದುರಸ್ತಿ ಕುರಿತು ಮಾರ್ಗದರ್ಶನ ಪಡೆದುಕೊಳ್ಳಲಾಗುವುದು ಎಂದರು.
ಅನ್ನಭಾಗ್ಯ ಪ್ರಚಾರಸಾಮಗ್ರಿ ಬಿಡುಗಡೆ:
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅನ್ನಭಾಗ್ಯ ಯೋಜನೆಯ ಕುರಿತ ಪ್ರಚಾರಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.
ಕೋವಿಡ್ ಸಂದರ್ಭದಲ್ಲಿ ಮರಣ ಹೊಂದಿದ ಸರಕಾರಿ ನೌಕರರ ಅವಲಂಬಿತರಿಗೆ ಅನುಕಂಪ ಆಧಾರದಲ್ಲಿ ನೇಮಕಾತಿ ಆದೇಶಪತ್ರಗಳನ್ನು ಸಚಿವರು ವಿತರಿಸಿದರು.
ಇದೇ ವೇಳೆ ನರೇಗಾ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಲಾಯಿತು.
ನರೇಗಾ ಯೋಜನೆ ಕುರಿತ ಪ್ರಚಾರಸಾಮಗ್ರಿಗಳನ್ನು ಕೂಡ ಸಚಿವದ್ವಯರು ಬಿಡುಗಡೆಗೊಳಿಸಿದರು.
ಶಾಸಕರಾದ ದುರ್ಯೋಧನ ಐಹೊಳೆ, ಬಾಬಾಸಾಹೇಬ್ ಪಾಟೀಲ, ವಿಠ್ಠಲ ಹಲಗೇಕರ, ಮಹೇಂದ್ರ ತಮ್ಮಣ್ಣವರ, ಶಾಸಕರಾದ ವಿಶ್ವಾಸ ವೈದ್ಯ, ನಿಖಿಲ್ ಕತ್ತಿ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಡಾ.ಸಾಬಣ್ಣ ತಳವಾರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಡಿಸಿಪಿ ಟಿ.ಶೇಖರ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.