ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣನ ಸಮಾಧಿಯಿಂದ ಪ್ರಾರಂಭಗೊಂಡು ಐದು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಸಂಗೊಳ್ಳಿಯಲ್ಲಿ ಅಂತ್ಯಗೊಳ್ಳುವ ಸಂಗೊಳ್ಳಿ ರಾಯಣ್ಣನ ವೀರಜ್ಯೋತಿ ಯಾತ್ರೆಗೆ ಶುಕ್ರವಾರ ನಂದಗಡದಲ್ಲಿ ಶಾಸಕ ವಿಠ್ಠಲ ಹಲಗೇಕರ ಚಾಲನೆ ನೀಡಿದರು.
ಬಳಿಕ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಂದಗಡ ಗ್ರಾಮ ಪಂಚಾಯ್ತಿ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಗಳ ಸಹಯೋಗದಲ್ಲಿ ಆಯೋಜಿಸಿದ್ದ 2024ರ ನಂದಗಡ ಉತ್ಸವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
‘ಕ್ರಾಂತಿವೀರನೆಂದೇ ಹೆಸರಾಗಿದ್ದ ಸಂಗೊಳ್ಳಿ ರಾಯಣ್ಣ ನಮ್ಮ ದೇಶ ಕಂಡ ಪ್ರಮುಖ ದೇಶಪ್ರೇಮಿ ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರು ಚನ್ನಮ್ಮಳ ಬಲಗೈ ಬಂಟನಾಗಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಿಡಿದೆದ್ದಿದ್ದ ರಾಯಣ್ಣ ದೇಶದ ಸ್ವಾತಂತ್ರಕ್ಕಾಗಿ ನೇಣುಗಂಬದವರೆಗೆ ನಿರಂತರ ಸೆಣಸಿದ ಮಹಾತ್ಮ ಎಂದರು.
ರಾಯಣ್ಣ ಸಂಗೊಳ್ಳಿಯಲ್ಲಿ ಜನ್ಮ ಪಡೆದರೂ ತಮ್ಮ ಆಶಯದಂತೆ ಅವರು ಐಕ್ಯರಾಗಿದ್ದು ನಂದಗಡದಲ್ಲಿ. ಕೇವಲ 33 ವರ್ಷ ಬದುಕಿದರೂ ಇಡೀ ಜಗತ್ತು ಅವರ ಹೆಸರು ಗುರುತಿಸುವಷ್ಟು ದೊಡ್ಡ ಸಾಧನೆ ಮಾಡಿದ್ದ ರಾಯಣ್ಣನ ದೇಶ ಪ್ರೇಮ, ನಿಸ್ವಾರ್ಥ ಸೇವೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ’ ಎಂದರು.
ಸಂಗೊಳ್ಳಿ ಉತ್ಸವದಂತೆ ನಂದಗಡದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಬೇಕು ಎಂಬುದು ರಾಯಣ್ಣನ ಅಭಿಮಾನಿಗಳ ಬೇಡಿಕೆಯಾಗಿದೆ. ಅದರಂತೆ ಸರ್ಕಾರ ಈ ವರ್ಷದಿಂದಲೇ ಜಿಲ್ಲಾಡಳಿತದಿಂದ ನಂದಗಡ ಉತ್ಸವ ಆಚರಣೆ ಮಾಡಲಾಗುತ್ತಿದೆ. ಬರುವ ವರ್ಷದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ನಂದಗಡ ಉತ್ಸವ ನಡೆಯಲಿದೆ ಎಂದು ಹಲಗೇಕರ ತಿಳಿಸಿದರು.
ಎಸಿ ಶ್ರವಣ ನಾಯಕ, ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಪಂ ಇಒ ವೀರನಗೌಡ ಏಗನಗೌಡರ, ನಂದಗಡ ಗ್ರಾಮ ಪಂಚಾಯತಿ ಅಧ್ಯಕ್ಷ ಯಲ್ಲಪ್ಪ ಗುರವ, ಉಪಾಧ್ಯಕ್ಷೆ ಸಂಗೀತಾ ಮಡ್ಡೀಮನಿ, ಪಿಡಿಒ ಸಾಗರ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.