ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕರವೀರ ತಾಲ್ಲೂಕಿನ ಕನ್ಹೇರಿ ಗ್ರಾಮದಲ್ಲಿನ ಸಿದ್ಧಗಿರಿ ಮಠದ ಕನ್ನಡ ನಾಮಫಲಕಗಳನ್ನು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ಹರಿದು, ಬೆಂಕಿ ಹಚ್ಚಿದ್ದಾರೆ.
ಕರ್ನಾಟಕದಲ್ಲಿ ಎಲ್ಲ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿದಕ್ಕೆ ಪ್ರತಿಯಾಗಿ, ಮಹಾರಾಷ್ಟ್ರದಲ್ಲಿನ ಕನ್ನಡ ಫಲಕಗಳಿಗೆ ಬೆಂಕಿ ಹಚ್ಚಲಾಗಿದೆ. ‘ಬೆಳಗಾವಿಯಲ್ಲಿ ಮರಾಠಿ ಫಲಕಗಳನ್ನು ಹಾಕಲು ಅವಕಾಶ ಇಲ್ಲ ಎಂದಾದರೆ, ಮಹಾರಾಷ್ಟ್ರಲ್ಲೂ ಕನ್ನಡ ಫಲಕ ಇರಲು ಬಿಡುವುದಿಲ್ಲ’ ಎಂದು ಶಿವಸೇನಾ ಮುಖಂಡ ಸಂಜಯ್ ಪವಾರ್ ಎಂದರು.
ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖಂಡ ರಾಜು ಜಾಧವ್ ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಕನ್ನಡ ಫಲಕ ಅಳವಡಿಸಲು ಅನುಮತಿ ನೀಡಿದ ಕೊಲ್ಹಾಪುರ ಜಿಲ್ಲಾಡಳಿತದ ಕ್ರಮ ಖಂಡನಾರ್ಹ’ ಎಂದರು.