ಬೆಳಗಾವಿ,: ವಿಧಾನಮಂಡಳದ ಚಳಿಗಾಲ ಅಧಿವೇಶನ ಡಿಸೆಂಬರನಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಪಡಿಸಿರುವುದಿಲ್ಲ. ಆದಾಗ್ಯೂ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಂದಿಲ್ಲಿ ಸೂಚಿಸಿದರು.

ಡಿಸೆಂಬರನಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನ ಸಿದ್ಧತೆಗೆ ಸಂಬಂಂಧಿಸಿದಂತೆ ನಡೆದ ಅಧಿಕಾರಿಗಳ ಹಾಗೂ ಹೋಟೆಲ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ಸಮಿತಿ, ಆಹಾರ ಸಮಿತಿ, ಸಾಮಗ್ರಿಗಳ ಖರೀದಿ ಹಾಗೂ ಮುದ್ರಣ ಸಮಿತಿ, ಸಾರಿಗೆ ಹಾಗೂ ಇಂಧನ ಸಮಿತಿ, ಆರೋಗ್ಯ ಸಮಿತಿ, ಪಾಸ್ ವಿತರಣಾ ಸಮಿತಿ, ದೂರು ನಿರ್ವಹಣಾ ಸಮಿತಿ ಸೇರಿದಂತೆ ಕಳೆದ ಬಾರಿಯಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಪ್ರತಿಯೊಂದು ಸಮಿತಿಯವರು ಪೂರ್ವಭಾವಿ ಸಭೆಯನ್ನು ನಡೆಸಿ ಸಿದ್ಧತೆಗಳನ್ನು ಆರಂಭಿಸಬೇಕು ಎಂದರು.

ಕೊಠಡಿಗಳನ್ನು ಕಾಯ್ದಿರಿಸಲು ನಿರ್ದೇಶನ:

ಅಧಿವೇಶನಕ್ಕೆ ಆಗಮಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಆದ್ದರಿಂದ ಡಿಸೆಂಬರ್ ಮಾಹೆಯ ಆರಂಭಿಕ ವಾರದಿಂದ ಯಾವುದೇ ಹೋಟೆಲಗಳು ಸಾರ್ವಜನಿಕರ ಬುಕ್ಕಿಂಗಗಳನ್ನು ಮಾಡದಿರುವುದು ಸೂಕ್ತ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಡಿಸೆಂಬರ್ 4 ರಿಂದ ಅಧಿವೇಶನ ಆರಂಭಗೊಳ್ಳಬಹುದು. ನವೆಂಬರ್ 6 ರ ಬಳಿಕ ಸ್ಪಷ್ಟಚಿತ್ರಣ ದೊರೆಯಲಿದೆ. ಕೊನೆಗಳಿಗೆಯಲ್ಲಿ ದಿನಾಂಕ ವ್ಯತ್ಯಾಸವಾಗಬಹುದು. ಕಳೆದ ಬಾರಿ ಹೊಟೇಲ್ ಕೊಠಡಿಗಳ ಬಿಲಗಳನ್ನು ಅತ್ಯಂತ ತ್ವರಿತವಾಗಿ ಹಾಗೂ ಸಂಪೂರ್ಣ ಬಿಲ್ ಪಾವತಿಸಲಾಗಿದೆ. ಈ ಬಾರಿ ಕೂಡ‌ ಯಾವುದೇ ವಿಳಂಬವಿಲ್ಲದೇ ಬಿಲ್ ಪಾವತಿಸಲಾಗುವುದು.

ಕೊಠಡಿಗಳ ಸ್ವಚ್ಛತೆ, ಆಹಾರದಲ್ಲಿ ಶುಚಿತ್ಚ ಕಾಪಾಡಿಕೊಳ್ಳಬೇಕು. ಅಧಿವೇಶನಕ್ಕೆ ಆಗಮಿಸುವವರಿಗೆ ಉತ್ತಮ ಅತಿಥ್ಯವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಅಧಿವೇಶನ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಜಿಲ್ಲಾಡಳಿತದ ನಿರ್ದೇಶನ ಪಾಲಿಸಬೇಕು ಎಂದು ಹೇಳಿದರು.

ಜಿ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷಲ್ ಭೋಯರ್, ಪೊಲೀಸ್ ವರಿಷ್ಠಾಧಿಕಾರಿ ಡಾ‌.ಭೀಮಾಶಂಕರ್ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.