ಬೆಳಗಾವಿ, ಅ.23 : ವೀರರಾಣಿ ಚೆನ್ನಮ್ಮನ ಕಾಕತಿ ಕೋಟೆ ಅರಣ್ಯ ಇಲಾಖೆ ಅಧೀನದಲ್ಲಿದ್ದರೆ, ಜನ್ಮಸ್ಥಳ ಖಾಸಗಿ ಒಡೆತನದಲ್ಲಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲಾಡಳಿತದಿಂದ ಭೂ ಸ್ವಾಧೀನ ಮಾಡಿ ವಶಕ್ಕೆ ಪಡೆದು ಆದಷ್ಟು ಬೇಗ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕಿತ್ತೂರಾಣಿ ಚನ್ನಮ್ಮ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಿತ್ತೂರು ಪ್ರಾಧಿಕಾರದಿಂದ ಬಂದ ಅನುದಾನದಿಂದ ಕಾಕತಿಯಲ್ಲಿ ಕೆಲವು ಕಾಮಗಾರಿಗಳನ್ನು  ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವದು. ಸರ್ಕಾರ ಕೊಟ್ಟ ಕಡಿಮೆ ಅನುದಾನದಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಉತ್ಸವ ನಡೆಸುತ್ತದೆ. ಆದರೆ ಇದಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಟ್ಟು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ವರ್ಷದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಕಿತ್ತೂರು ರಾಣಿ ಚನ್ನಮ್ಮಳ ಹೋರಾಟ, ಬಾಬಾಸಾಹೇಬ್ ಅಂಬೇಡ್ಕರವರ ಸಂವಿಧಾನ, ಬಸವಣ್ಣನವರ ಸಮಾನತೆ, ಬುದ್ಧನ ತತ್ವ, ಶಾಹು ಮಹಾರಾಜರ ಶಿಕ್ಷಣ ಕ್ರಾಂತಿ ಕುರಿತು ತಿಳಿದುಕೊಂಡರೆ ದೇಶದ ಅಭಿವೃದ್ದಿ ಜೊತೆಗೆ ನಮ್ಮ ವೈಯಕ್ತಿಕ ಬದುಕನ್ನು ಸಹ ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ವೀರಜ್ಯೋತಿಯು ರಾಜ್ಯಾದ್ಯಂತ ಸಂಚರಿಸುವ ಮೂಲಕ ಕಿತ್ತೂರಿನ ಐತಿಹಾಸಿಕ ಘಟನೆ, ಪರಂಪರೆ, ಸ್ವಾತಂತ್ರ್ಯ ಹೋರಾಟ, ತತ್ವಾದರ್ಶ, ಇತಿಹಾಸ ಚರಿತ್ರೆ ಇವುಗಳನ್ನು ಎಲ್ಲೆಡೆ ಸಾರಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಆರಪಿಡಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಕೋಲಕಾರ ಅವರು ಉಪನ್ಯಾಸ ನೀಡಿದರು.  ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂಬ ಮೊಟ್ಟ ಮೊದಲ ಕಾದಂಬರಿ, ಕಿತ್ತೂರು ಸಂಸ್ಥಾನ ಸಂದೇಶ ಸಾರುವ ಕನ್ನಡ ನೆಲದ ಮಹಾ ಸೌಭಾಗ್ಯ ವೀರರಾಣಿ ಕಿತ್ತೂರು ಚನ್ನಮ್ಮ ಎಂಬ ಗ್ರಂಥಗಳು ರಚನೆಯಾಗಿವೆ ಇವುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು. ವಿದ್ವಾಂಸರಾದ ಕ.ಸ ಹಾಲಪ್ಪನವರು ವೀರರಾಣಿ ಕಿತ್ತೂರು ಚೆನ್ನಮ್ಮಳ ಆಡಳಿತ ವೈಖರ್ಯ ಮೆಚ್ಚಿ ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದು ಹೇಳಿದರು.

ಶಾಸಕ ಆಸೀಫ್ (ರಾಜು) ಸೇಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷಲ್ ಭೋಯರ್, ಕಾಕತಿ ಶಿವಪೂಜೆ ಮಠದ ಸ್ವಾಮೀಜಿಗಳಾದ ರಾಚಯ್ಯ ಸ್ವಾಮಿಗಳು, ಉದಯ ಸ್ವಾಮೀಜಿ, ಕಾಕತಿ ಗ್ರಾ ಪಂ. ಅಧ್ಯಕ್ಷರಾದ ವರ್ಷಾ ಮುಚ್ಚಂಡಿಕರ, ಉಪಾಧ್ಯಕ್ಷರಾದ ರೇಣುಕಾ ಕೊಳಿಕರ, ಕಾಕತಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಬೆಳಗಾವಿ ಉಪವಿಭಾಗಾಧಿಗಳಾದ ಶ್ರವಣ ನಾಯ್ಕ, ತಹಶೀಲ್ದಾರ ಬಸವರಾಜ‌ ನಾಗರಾಳ, ಜಿ. ಪಂ. ಸದಸ್ಯ ಸಿದ್ದನಗೌಡ ಸುಣಗಾರ, ಯಲ್ಲಪ್ಪ ಕೊಳಿಕರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.