ಬೆಳಗಾವಿ: ‘ಕಳಸಾ ಬಂಡೂರಾ ಯೋಜನೆಗೆ ಆದ್ಯತೆ ನೀಡುತ್ತಿದ್ದು, ಕೆಲವು ತಾಂತ್ರಿಕ ಅಡತಡೆ ಆಗಿವೆ, ಈ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ಈಗಾಗಲೆ ಚರ್ಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ ಅವರಿಂದಿಲ್ಲಿ ಹೇಳಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಪ್ರತಿ ಯೋಜನೆಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವೆ.  ಯಾವ ಯೋಜನೆಗೆ ಎಷ್ಟು ಅನುದಾನ ನೀಡಬೇಕು ಎಂದು ಚರ್ಚೆ ನಡೆಯಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ 20 ಹಳ್ಳಿಗಳ ಸ್ಥಳಾಂತರ ವಿಚಾರವೂ ಗಮನದಲ್ಲಿದೆ. ಈ ಭಾಗದ ಬಹುಪಾಲು ಜಲಾಶಯಗಳಲ್ಲಿ ಶೇ 90ರಷ್ಟು ನೀರು ಭರ್ತಿಯಾಗಿದೆ. ಸರಿಯಾಗಿ ನಿರ್ವಹಣೆ ಮಾಡಿದರೆ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸಬಹುದು. ಮಲಪ್ರಭಾ ಅಣೆಕಟ್ಟೆಯಲ್ಲಿ ಶೇ 50ರಷ್ಟು ಮಾತ್ರ ನೀರಿದೆ’ ಘಟಪ್ರಭಾ, ಮಾರ್ಕಂಡೇಯ ಆಣೆಕಟ್ಟು ಹಾಗೂ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಶೇ 90ಕ್ಕೂ ಹೆಚ್ಚು ನೀರು ಸಂಗ್ರಹವಾಗಿದೆ. ಆಲಮಟ್ಟಿ ಅಣೆಕಟ್ಟೆ ಶೇ 98ರಷ್ಟು ಭರ್ತಿಯಾಗಿದೆ ಎಂದರು.  

ರಾಜ್ಯದಲ್ಲಿ ಬಹುತೇಕ ಕಡೆ ಕಾಲುವೆಗಳ ನೀರು ಕೊನೆಯ ಹಂತದ ರೈತರಿಗೆ ತಲುಪುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಕಾನೂನು ತರಲಾಗುವುದು. ‘ಕಾಲುವೆ ನೀರು ದುರ್ಬಳಕೆ ತಡೆಗೆ ಮತ್ತು ನೀರಿನ ರಕ್ಷಣೆಗೆ ಪ್ರತ್ಯೇಕ ಕಾನೂನು ಅಗತ್ಯ. ಮಹಾರಾಷ್ಟ್ರದಲ್ಲಿ ನೀರಿನ ಬಳಕೆ ಶಿಸ್ತಿನಿಂದ ಕೂಡಿದ್ದು, ಅದೇ ಮಾದರಿ ರಾಜ್ಯದಲ್ಲೂ ಜಾರಿ ಮಾಡಲಾಗುವದು. ಕೆಲವು ಕಡೆ ಮಾತ್ರ ನೀರು ಬಳಕೆದಾರರ ಸಂಘಗಳು ಕ್ರಿಯಾಶೀಲವಾಗಿವೆ. ರಾಜ್ಯದ ಎಲ್ಲಾ ಸಂಘಗಳು ಕ್ರಿಯಾಶೀಲವಾಗಬೇಕು. ಹೊಸ ಸಂಘಗಳ ರಚನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

‘ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಿಂದ (ವಾಲ್ಮಿ) ಎಲ್ಲ ಅಧಿಕಾರಿ– ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶವಿದೆ. ವಿಭಾಗ ಮಟ್ಟದಲ್ಲೂ ಕೇಂದ್ರ ತೆರೆದು ತರಬೇತಿ ನೀಡಲಾಗುವುದು ಎಂದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ 671 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 651 ಖಾಲಿ ಇವೆ. ನೇಮಕಾತಿಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಮಹೇಂದ್ರ ತಮ್ಮಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.