ಬೆಳಗಾವಿ :ಅವಕಾಶಗಳಿಂದ ವಂಚಿತರಾದ ಜಾತಿಯವರು ಅವಕಾಶಗಳನ್ನು ಪಡೆದುಕೊಳ್ಳಲು ಸಂಘಟನೆ ಶಕ್ತಿ ಬೇಕಾಗುತ್ತದೆ. ಹಾಗಾಗಿ ಜಾತಿ ಸಮಾವೇಶ ಮಾಡಿದರೆ ತಪ್ಪಲ್ಲ. ಕುರುಬ ಜಾತಿಯಲ್ಲಿ ನಾನು ಹುಟ್ಟಿದ್ದೇನೆ ಅಷ್ಟೇ. ಆದರೆ ನಾನು ಜಾತಿ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿಲ್ಲ, ನಾನು ಜಾತಿವಾದಿ ಅಲ್ಲ. ಜಾತಿವಾದಿ ಮಠಗಳನ್ನು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಿಲ್ಲಿ ಹೇಳಿದರು.

ಬೆಳಗಾವಿಯಲ್ಲಿ ನಡೆದ ಶೆಫರ್ಡ್ ಇಂಡಿಯಾ ರಾಷ್ಟ್ರೀಯ 9ನೇ ಮಹಾ ಸಮಾವೇಶದಲ್ಲಿ ಮಾತನಾಡಿದ ಅವರು,  ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ನಾನು ರಾಜಕೀಯದಲ್ಲಿ ಇರೋವರೆಗೂ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ‌ ಎಂದು ನುಡಿದರು.

ಬಡವರು ಕೈ ಮುಗಿಯುತ್ತಲೇ ಇರಬೇಕು. ಮುಂದೆ ಬಂದರೆ ನಮ್ಮ ಸಮಾನ ಬರುತ್ತಾರೆ ಎಂಬ ಭಯ.‌ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲ ಜಾತಿಯವರಿಗೂ ಸಮಾನತೆ ಕಲ್ಪಿಸಿದ್ದರು. ಶ್ರೇಣೀಕೃತ ವ್ಯವಸ್ಥೆ ಹೋಗಿ ಸಮಾನಾಂತರ ವ್ಯವಸ್ಥೆ ಬರಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಹೋರಾಟ ಮಾಡಿದ್ದರು.  ಕನಕದಾಸರು ಕುಲ ಕುಲ ಎಂದು ಹೊಡೆದಾಡಬೇಡಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿದಿರಾ ಎಂದು ಹೇಳಿದ್ದರು.‌ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಕಂಡಿದ್ದ ಕನಸು ನನಸಾಗಬೇಕಾದರೆ ಎಲ್ಲ ಸಮಾಜಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮೇಲೆ ಬಂದರೆ ಮಾತ್ರ ಅದು ಸಾಕಾರವಾಗುತ್ತದೆ ಎಂದರು.

ಕರ್ನಾಟಕ ಬಿಟ್ಟು ರಾಜಕೀಯವಾಗಿ ಬೇರೆ ರಾಜ್ಯಗಳಲ್ಲಿ ಸಂಘಟನೆ ಮತ್ತು ನಾಯಕತ್ವದ ಕೊರತೆಯಿಂದ ಬೆಳೆದಿಲ್ಲ. ಹಾಗಾಗಿ, ಎಲ್ಲರೂ ಸಂಘಟಿತರಾಗಬೇಕು. ನಾಯಕತ್ವ ಬೆಳೆಸಿಕೊಳ್ಳಲು ಪ್ರೀತಿ ಇರಬೇಕು. ಸಂಘಟನೆ ಬೆಳೆಸಬೇಕು. ಕುರುಬರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ವಾಸವಿದ್ದಾರೆ. ಅವರೆಲ್ಲಾ ಒಂದು ವೇದಿಕೆಯಲ್ಲಿ ಸಂಘಟಿತರಾಗಬೇಕು. ಜನರು ಸಂಘಟಿತರಾಗಿ ಸಂವಿಧಾನ ಕೊಟ್ಟ ಹಕ್ಕು ಪಡೆಯಬೇಕು. ಜಾತಿಯಿಂದ ಸಂಘಟನೆಯಾದರೆ ಅದು ಜಾತಿವಾದ ಅಲ್ಲ. ಯಾವ ಜಾತಿಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿದವೆಯೋ ಅವು, ಜಾತಿ ಸಮಾವೇಶ ಮಾಡಿದರೆ ಅದು ಜಾತಿವಾದ ಎಂದು ಪ್ರತಿಪಾದಿಸಿದರು.

ಕಾಗಿನೆಲೆ ಗುರುಪೀಠ ಕುರುಬ ಸಮುದಾಯಕ್ಕೆ ಮಾತ್ರ ಸಿಮೀತವಲ್ಲ. ಇದು ತುಳಿತಕ್ಕೊಳಗಾದ ಎಲ್ಲ ಸಮಾಜಗಳ ಪೀಠ. ಎಲ್ಲರೂ ಆರ್ಥಿಕ,ಸಾಮಾಜಿಕ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಂದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಎರಡನೇ ರಾಜಧಾನಿ ಆಗಲು‌ ಸಿದ್ದರಾಮಯ್ಯನವರ ಕೊಡುಗೆ ಸಾಕಷ್ಟಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಅವರ ಅವಧಿಯಲ್ಲಿ ಒಟ್ಟು 30 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಎರಡರಲ್ಲಿ ಒಂದು ಲೋಕಸಭೆ ಕ್ಷೇತ್ರಕ್ಕೆ‌ ಕುರುಬ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತೇವೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಲಿಂಗಾಯತ ಸಮಾಜದ ಜೊತೆಗೆ ಕುರುಬ ಸಮಾಜ ಅತ್ಯಂತ ಅವಿನಾಭಾವ ಸಂಬಂಧ ಹೊಂದಿದೆ. ನನ್ನ ರಾಜಕೀಯ ಜೀವನದ ಗುರು ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮಾಜದ ಕಣ್ಮನಿ ಅಲ್ಲ. ಇಡೀ ರಾಜ್ಯದ ಕಣ್ಮನಿ ಎಂದು ಹೊಗಳಿದರು.

ಮಾಜಿ ಸಚಿವ‌ ಎಚ್.ಎಂ.ರೇವಣ್ಣ ಕುರುಬ ಸಮುದಾಯದ ವಿವಿಧ ಬೇಡಿಕೆಗಳನ್ನುಳ್ಳ 10 ನಿರ್ಣಯಗಳನ್ನು ಮಂಡಿಸಿದರು. ಶ್ರೀ. ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿಯವರುಗಳ ದಿವ್ಯ ಸಾನ್ನಿಧ್ಯ ವಹಿಸಿದ್ದರು.  ಸಮಾರಂಭದಲ್ಲಿ ಹರಿಯಾಣ ರಾಜ್ಯಪಾಲ ಭಂಡಾರು ದತ್ತಾತ್ರೇಯ,ಸಚಿವ ಆರ್.ಬಿ.ತಿಮ್ಮಾಪುರ, ವಿಧಾನಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಎಚ್.ವಿಶ್ವನಾಥ, ಶಾಸಕರಾದ ಎಚ್.ವೈ.ಮೇಟಿ, ಅಶೋಕ ಪಟ್ಟಣ, ಲಕ್ಷ್ಮಣ ಸವದಿ, ಆಸೀಫ್ ಸೇಠ್, ರಾಘವೇಂದ್ರ ಹಿಟ್ನಾಳ, ಭೀಮಾನಾಯಿ̧̧̧ಕ̧̧ ಕೇಂದ್ರ ಗ್ರಾಮೀಣಾಭಿವೃದ್ಧಿಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೋವಾ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವಲೇಕರ್, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಮಹದೇವ್ ಜನಕಾರ್, ದತ್ತಾತ್ರೇಯ ಭರ್ನೆ, ರಾಮ ಶಂಕರ್ ಶಿಂಧೆ, ಆಂಧ್ರಪ್ರದೇಶ ಸಚಿವೆ ಕೆ.ವಿ.ಉಷಾಶ್ರೀ ಚರಣ್, ಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರ ಮೊಮ್ಮಗ ಭೂಷಣ್ ರಾಜೆ ಹೋಳ್ಕರ್, ಗುಜರಾತ್ ರಾಜ್ಯದ ಮುಖಂಡರಾದ ಸಾಗರ್ ರಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ರು