ಬೆಳಗಾವಿ, ಜು. 27: ಪ್ರವಾಹದಿಂದ ಉಂಟಾಗುವ ಮನೆಹಾನಿಯ ಸಮೀಕ್ಷೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅಲ್ಲದೇ ಮಾನವ ಹಾಗೂ ಪ್ರಾಣಿಗಳ ಜೀವಹಾನಿಯಾದಾಗ ತುರ್ತಾಗಿ ಪರಿಹಾರಧನವನ್ನು ನೀಡಲು ಕ್ರಮ ಕೈಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಅಂಜುಮ್ ಪರ್ವೇಜ್ ಅವರಿಂದಿಲ್ಲಿ ಹೇಳಿದರು.

ಅತಿವೃಷ್ಟಿಯಿಂದ ಬಾಧಿತಗೊಂಡಿರುವ ಗ್ರಾಮಗಳು ಮತ್ತು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಚಿಕ್ಕೋಡಿಯಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು. ನದಿಗಳ ಒಳಹರಿವು, ಮಳೆಯ ಪ್ರಮಾಣ, ಜಲಾಶಯ ಮಟ್ಟ  ಮತ್ತು ಮಹಾರಾಷ್ಟದಿಂದ ಬಿಡುವ ನೀರಿನ ಪ್ರಮಾಣ ಇವುಗಳ ಮೇಲೆ ನಿಗಾವಹಿಸುವುದರಿಂದ ಅತ್ಯಂತ ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರವಾಹ ನಿರ್ವಹಣೆಯನ್ನು ಮಾಡಬಹುದು. ಮಳೆಯ ಪ್ರಮಾಣ ಮತ್ತು ಮಹಾರಾಷ್ಟ್ರದಿಂದ ನೀರು ಬಿಡುಗಡೆ ಕುರಿತು ಅಲ್ಲಿಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದುಕೊಂಡು ಸಮನ್ವಯತೆಯಿಂದ ಕೆಲಸ  ಮಾಡಬೇಕು ಎಂದು ತಿಳಿಸಿದರು.

ಪ್ರವಾಹ ಹಾನಿ ತಡೆಗಟ್ಟಲು ಆದ್ಯತೆ: ಪ್ರವಾಹದ ಬಳಿಕ ಪುನರ್ವಸತಿ ಕಲ್ಪಿಸುವುದರ ಬದಲಾಗಿ ಮುಂಚಿತವಾಗಿಯೇ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆದ್ಯತೆ ನೀಡಬೇಕು. ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಶಿಥಿಲಗೊಂಡಿರುವ ಮನೆಗಳನ್ನು ಪರಿಶೀಲಿಸಿ ಕುಟುಂಬಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು. ಸಾಧ್ಯವಿರುವ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.

2019 ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಕುರಿತು ಸಮರ್ಪಕವಾಗಿ ದತ್ತಾಂಶ ದಾಖಲೆಯಾಗಿರಲಿಲ್ಲ. ಆದ್ದರಿಂದ ಮನೆಹಾನಿಗಿರುವುದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಕೈಗೊಂಡಾಗ ಕೆಟಗರಿವಾರು ನಿಖರ ಮಾಹಿತಿಯನ್ನು ಒದಗಿಸಬೇಕು. ಅತಿವೃಷ್ಟಿ ಹಾಗೂ ಪ್ರವಾಹದ ಬಳಿಕ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ನೀರು ಕಡಿಮೆಯಾದ ಬಳಿಕ ಪ್ರವಾಹದಿಂದ ಬಾಧಿತಗೊಂಡಿರುವ ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಬೇಕು.

ಮರುಬಿತ್ತನೆಗೆ ಬೀಜ ಪೂರೈಕೆ: ಕೆಲ ರೈತರು ಮತ್ತೊಮ್ಮೆ ಬಿತ್ತನೆ ಬೀಜ ಒದಗಿಸುವಂತೆ ಕೋರುತ್ತಿದ್ದಾರೆ. ಆದ್ದರಿಂದ ಅಂತಹ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಪೂರೈಸಬೇಕು. ಜಿಲ್ಲೆಯಲ್ಲಿ ಶೇ.100 ರಷ್ಟು ಬಿತ್ತನೆ ಆಗಬೇಕು. ರೈತರಿಗೆ ಬೀಜ ಪೂರೈಕೆಯಲ್ಲಿ ತೊಂದರೆಯಾಗಬಾರದು. ಆದ್ದರಿಂದ ಅಗತ್ಯ ಬೀಜ-ಗೊಬ್ಬರಗಳ ದಾಸ್ತಾನು  ಇಟ್ಟುಕೊಳ್ಳಬೇಕು ಎಂದು ಹೇಳಿದರು.