ಬೆಳಗಾವಿ : ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳಗಾವಿ -ಕೊಲ್ಹಾಪೂರ ನಡುವೆ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಯನ್ನು ಪ್ರತಿದಿನ ಎದುವರಿಸುವಂತಾಗಿದೆ. ಆದ್ದರಿಂದ ಕಾಮಗಾರಿ ಮುಗಿಯುವವರೆಗೆ ಬೆಳಗಾವಿ-ಕರಾಡ್ ನಡುವಿನ ಟೋಲ್ ಶುಲ್ಕವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪಾಲಿಕೆ ಮಾಜಿ ಮೇಯರ್ ವಿಜಯ ಮೋರೆ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
ಪುಣೆ-ಬೆಂಗಳೂರು ಹೆದ್ದಾರಿ ಸಂಚಾರ ಮತ್ತು ಸಂವಹನದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸ್ವರ್ಣ ಚತುಷ್ಪಥ ಯೋಜನೆ ಜಾರಿಗೆ ಬಂತು. ಮಹಾಮಾರ್ಗದ ಬೆಳಗಾವಿ-ಸಂಕೇಶ್ವರ-ಕೊಲ್ಲಾಪುರ-ಕರಾಡ್ ಭಾಗದಲ್ಲಿ ನಿರಂತರ ವಾಹನ ಸಂಚಾರ ದಟ್ಟವಾಗಿರುತ್ತದೆ. ಕರ್ನಾಟಕ ಮತ್ತು ಗೋವಾದಿಂದ ಬೆಳಗಾವಿ ಮೂಲಕ ದೇಶದ ವಿವಿಧ ಭಾಗಗಳಿಗೆ ವಾಹನ ಸಂಚಾರ ನಿರಂತರವಾಗಿರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳಿಗೆ ಪ್ರಯಾಣಿಸುವ ಜನರು ತೊಂದರೆ ಎದುರಿಸುತ್ತಿದ್ದಾರೆ.

ಪ್ರಸ್ತುತ, ರಸ್ತೆ ಅಪೂರ್ಣವಾಗಿರುವುದರಿಂದ ಬೆಳಗಾವಿ-ಕೊಲ್ಲಾಪುರ ನಡುವಿನ ಪ್ರಯಾಣಕ್ಕೆ ಎರಡ್ಮೂರು ಗಂಟೆ ಮತ್ತು ಮುಂದಿನ ಮಾರ್ಗಕ್ಕೆ ಒಂದೆರಡು ತಾಸು ತೆಗೆದುಕೊಳ್ಳುತ್ತಿದೆ.
ಅಭಿವೃದ್ಧಿಗೆ ಸಹನೆ ಇರಬಹುದು, ಆದರೆ ವಾಹನಗಳ ಚಕ್ರಗಳು ಹಾಳಾಗುತ್ತಿವೆ, ಅಪೂರ್ಣ ರಸ್ತೆ ಮತ್ತು ವೇಗ ತಡೆಗಳಿಂದಾಗಿ ಬಹಳಷ್ಟು ವಾಹನ ದಟ್ಟಣೆ, ಧೂಳಿನ ಸಂಚಾರ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಆದ್ದರಿಂದ ಹೆದ್ದಾರಿ ಕಾಮಗಾರಿ ಮುಗಿಯುವವರೆಗೆ ಬೆಳಗಾವಿ- ಕರಾಡ್ ಮಾರ್ಗದ ಟೋಲ್ ಶುಲ್ಕ ಸ್ಥಗಿತಗೊಳಿಸಲು ವಿನಂತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.