ಬೆಳಗಾವಿ : ತಾಲ್ಲೂಕಿನ ಹಲಗಾ–ಮಚ್ಛೆ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತಲೆದೋರಿದ್ದ ಕಾನೂನು ತೊಡಕುಗಳು ಬಗೆಹರಿದಿವೆ. ತಾಂತ್ರಿಕ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ಕೈಬಿಟ್ಟಿದ್ದ ಗುತ್ತಿಗೆದಾರರಿಂದಲೇ ಇದನ್ನು ಮುಂದುವರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ. ಆ ಬಗ್ಗೆ ದೆಹಲಿ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ. ಇನ್ನು ಬೆಳಗಾವಿಗೆ ರಿಂಗ್‌ ರಸ್ತೆ ಮಂಜೂರಾಗಿದೆ. ಭೂಸ್ವಾಧೀನ ಮತ್ತು ಸಮೀಕ್ಷೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದನ್ನು ತಡೆಹಿಡಿಯಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ. ರೈತರಿಗೆ ಏನೇ ಸಮಸ್ಯೆಗಳಿದ್ದರೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಗೆಹರಿಸುತ್ತಾರೆ. ಹಿಂದಿನ ಸರ್ಕಾರದ ಅವಧಿ ಯೋಜನೆ ಇದಾಗಿದ್ದು, ಅದನ್ನು ವಿರೋಧಿಸುವುದು ಮತ್ತು ಪ್ರತಿಭಟಿಸುವುದರಲ್ಲಿ ಅರ್ಥವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.

ನಗರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಬಹುದಿನಗಳಿಂದ ನೆನೆಗುದಿಗೆ ಬಿದ್ನದಿರುವ ಬೈಪಾಸ ರಸ್ತೆಯನ್ನು ಶೀಘ್ರದಲ್ಲೇ ಮುಗಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ರೈತರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಪರಿಹಾರ ಸೂಚಿಸಲಿದ್ದಾರೆ ಎಂದರು.

ನಕ್ಷೆಯನ್ನು ಬದಲಿಸಿ ರಸ್ತೆ ನಿರ್ಮಾಣ;

ಬೆಳಗಾವಿಯ ತಿನಿಸು ಕಟ್ಟೆ ನಿರ್ಮಿಸಿದ ಜಾಗ ಒಬ್ಬರದ್ದು. ಬೇರೆ ಬೇರೆ ಇಲಾಖೆಯವರು ಅದನ್ನು ನಿರ್ಮಿಸಿದ್ದಾರೆ. ತರಾತುರಿಯಲ್ಲಿ 30 ವರ್ಷಗಳ ಅವಧಿಗೆ ಅದನ್ನು ಲೀಸ್ ಕೊಟ್ಟಿದ್ದಾರೆ. ವ್ಯಾಪಾರಿ ಮಳಿಗೆಗಳಿಗೆ ಕಡಿಮೆ ಬಾಡಿಗೆ ಮೊತ್ತ ನಿಗದಿಗೊಳಿಸಲಾಗಿದೆ. ಇವೆಲ್ಲ ಅಂಶಗಳ ಕುರಿತು ತನಿಖೆ ನಡೆಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ನೇಮಿಸಿದ್ದೇವೆ. ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಸತೀಶ ಜಾರಕಿಹೊಳಿ, ನಗರದ ಕೆಲವೆಡೆ ಯಾರೇ ವಿರೋಧಿಗಳಿದ್ದರೆ ಅವರ ಮನೆ, ಕಾರ್ಖಾನೆಗಳು ಮತ್ತು ವ್ಯಾಪಾರಿ ಮಳಿಗೆಗಳನ್ನೇ ನೆಲಸಮಗೊಳಿಸಿ, ನಕ್ಷೆಯನ್ನೇ ಬದಲಿಸಿ ರಸ್ತೆ ನಿರ್ಮಿಸಿದ್ದಾರೆ. ಆ ಬಗ್ಗೆ ಗಮನಕ್ಕೆ ಬಂದಿದ್ದು, ಒಂದೊಂದೇ ಅಕ್ರಮದ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಂಕಮ್‌ ಹೋಟೆಲ್‌ನಿಂದ ಕೇಂದ್ರೀಯ ಬಸ್‌ ನಿಲ್ದಾಣ, ಅಶೋಕ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಂತ್ರಿಕವಾಗಿ ಎಲ್ಲಿ ಅನುಕೂಲವಿದೆಯೇ ಅಲ್ಲಿ ಕಾಮಗಾರಿ ಮಾಡುತ್ತಾರೆ. ಇನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆ. ಅದಕ್ಕೆ ವೈದ್ಯಕೀಯ ಉಪಕರಣಗಳಿಗಾಗಿ 150 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಶೀಘ್ರವೇ ಅವುಗಳನ್ನು ಪೂರೈಸುತ್ತೇವೆ. ಬಿಮ್ಸ್‌ನಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸತೀಶ ಹೇಳಿದರು.

ನಮ್ಮಲ್ಲಿ ಬಸ್‌ಗಳ ಕೊರತೆಯಿದೆ. ಅದರಲ್ಲೂ ಖಾನಾಪುರ ತಾಲ್ಲೂಕಿನಲ್ಲಿ ಸಮಸ್ಯೆ ಹೆಚ್ಚಿದೆ. ಇದಕ್ಕೆ ತಾತ್ಕಾಲಿಕವಾಗಿ ಅಗತ್ಯವಿರುವ ವ್ಯವಸ್ಥೆ ಮಾಡುತ್ತೇವೆ. ಕೆಲವೆಡೆ ಬಸ್‌ಗಳನ್ನು ಬಿಡಿಸುತ್ತೇವೆ. ಈ ಬಾರಿ ಬಜೆಟ್‌ನಲ್ಲಿ 4 ಸಾವಿರ ಹೊಸ ಬಸ್‌ಗಳನ್ನು ಖರೀದಿಸುವುದಾಗಿ ಸಿ.ಎಂ ಘೋಷಿಸಿದ್ದಾರೆ. ಆ ಬಸ್‌ಗಳು ಬಂದರೆ ಬಸ್‌ ಸಮಸ್ಯೆ ಬಗೆಹರಿಯುತ್ತದೆ. ಇನ್ನು ಹಿರೇಕೋಡಿ ಜೈನ ಮುನಿಗಳ ಹತ್ಯೆ ವಿಚಾರ ಮುಗಿದು ಹೋದ ಅಧ್ಯಾಯ ಎಂದು ಮಾಧ್ಯಮಗಳ ಪ್ರಶ್ನೆಗೆ ಸತೀಶ ಜಾರಕಿಹೊಳಿ ಉತ್ತರಿಸಿದರು.