ದಾವಣಗೆರೆ,: ಅಗಲಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ  ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.

ನಗರದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮಣ್ಣಿನ ಬದಲಿಗೆ ವಿಭೂತಿ ಗಟ್ಟಿಗಳೊಂದಿಗೆ ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಲಾಯಿತು. ಇದಕ್ಕೆ ಸಿದ್ಧಗಂಗಾ ಮಠದಿಂದ 100 ವಿಭೂತಿಗಟ್ಟಿಗಳನ್ನು ಕಳಿಸಿಕೊಡಲಾಗಿತ್ತು.

ಅಂತ್ಯಕ್ರಿಯೆಯ ವೇಳೆ ಶಾಮನೂರರ ಪಾರ್ಥಿವ ಶರೀರಕ್ಕೆ ಪೊಲೀಸರು ತ್ರಿವರ್ಣ ಧ್ವಜ ಹೊದಿಸಿ ಗೌರವ ಸೂಚಿಸಿದರು. ನಂತರ ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದರು.

ಬಳಿಕ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಕುಟುಂಬಸ್ಥರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ಹ ಹಸ್ತಾಂತರಿಸಿದರು.

ಪಾರ್ಥೀವ ಶರೀರ ಮೆರವಣಿಗೆ

ಬೆಂಗಳೂರಿನ ಸದಾಶಿವನಗರದ ನಿವಾಸದಿಂದ ಮಧ್ಯರಾತ್ರಿ ಹೊರಟಿದ್ದ ಮೃತದೇಹ ಇಂದು ಬೆಳಗ್ಗೆ 4 ಗಂಟೆಯ ವೇಳೆಗೆ ದಾವಣಗೆರೆಗೆ ತಲುಪಿತು. ಮೊದಲು ಹಿರಿಯ ಮಗ ಎಸ್ಎಸ್ ಬಕ್ಕೇಶ್ ನಿವಾಸ ನಂತರ ಎಸ್.ಎಸ್ ಗಣೇಶ ಮನೆ, ಕೊನೆಗೆ 3ನೇ ಮಗ ಸಚಿವ ಎ.ಎಸ್ ಮಲ್ಲಿಕಾರ್ಜುನ್ ಮನೆಯಲ್ಲಿ ಕಣ್ವೆಕುಪ್ಪೆ ಶ್ರೀಗಳ ಸಮ್ಮುಖದಲ್ಲಿ ವಿಧಿ ವಿಧಾನ ನಡೆಯಿತು.

ಮೂರು ಮನೆಗಳಲ್ಲಿ ವಿಧಿ ವಿಧಾನ ಮುಕ್ತಾಯದ ನಂತರ ಶಾಮನೂರು ಶಿವಶಂಕರಪ್ಪ ನಿವಾಸದ ಮುಂಭಾಗ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹೈಸ್ಕೂಲ್‌ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಸಾರ್ವಜನಿಕರ ದರ್ಶನ ಮುಕ್ತಾಯದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ‌ ಮೆರವಣಿಗೆ ಸಾಗಿ ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ರೈಸ್ ಮಿಲ್‌ವರೆಗೆ ಅಂತಿಮ ಯಾತ್ರೆ ನಡೆಯಿತು. ಹಳೇ ಕೋರ್ಟ್‌ ಮೈದಾನ, ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕ ದೇವಾಸ್ಥಾನ, ಹಗೆದಿಬ್ಬಸರ್ಕಲ್, ಕಾಳಿಕಾಂಬ ದೇವಸ್ಥಾನ ರಸ್ತೆ, ಗ್ಯಾಸ್ ಕಟ್ಟೆ ಸರ್ಕಲ್, ಬಕ್ಕೇಶ್ವರ ದೇವಸ್ಥಾನದ ಮುಂಭಾಗ, ಹಾಸಭಾವಿ ಸರ್ಕಲ್, ಗಣೇಶ ದೇವಸ್ಥಾನ, ಅರಳಿ ಮರ ಸರ್ಕಲ್, ವೆಂಕಟೇಶ್ವರ ಸರ್ಕಲ್ ಮೂಲಕ ಕಲ್ಲೇಶ್ವರ ರೈಸ್ ಮಿಲ್‌ಗೆ ತರಲಾಯಿತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಹೆಚ್‌.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಎಂ.ಬಿ.ಪಾಟೀಲ್‌, ಖಂಡ್ರೆ, ಮುನಿಯಪ್ಪ, ಶರಣಬಸಪ್ಪ ದರ್ಶನಾಪುರ, ಡಿ.ಸುಧಾಕರ್‌, ಜಮೀರ್ ಅಹ್ಮದ್‌, ಬೋಸರಾಜು, ಸತೀಶ್‌, ಹೆಬ್ಬಾಳ್ಕರ್‌, ವಿಧಾನಸಭೆ ವಿಪಕ್ಷ ನಾಯಕ ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿಶ್ರೀ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಪೂಜ್ಯರು, ರಂಭಾಪುರಿ ಜಗದ್ಗುರುಗಳು, ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ಸೇರಿ ವಿವಿಧ ಮಠಾಧೀಶರು, ಶಾಮನೂರು ಕುಟುಂಬಸ್ಥರು, ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆ ವೇಳೆ ಉಪಸ್ಥಿತರಿದ್ದರು. ಕ್ರಿಶ್ಚಿಯನ್ ಧರ್ಮಗುರುಗಳು ಸಹ ಈ ವೇಳೆ ಭಾಗಿಯಾಗಿದ್ದರು.