ಬೆಳಗಾವಿ: ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಸಂಕಮ್ ಹೋಟೆಲ್ ಮೂಲಕ ಕಿಲ್ಲಾವರೆಗೆ ಅಶೋಕ ವೃತ್ತದ ಬಳಿ ನಿರ್ಮಿಸಲು ಉದ್ಧೇಶಿಸಿರುವ ಪ್ರಸ್ತಾವಿತ ರಸ್ತೆ ಫ್ಲೈ ಓವರ್ ನಿರ್ಮಾಣ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು, ಆರಂಭಿಕವಾಗಿ ಪ್ರಸ್ತಾವಿತ ಯೋಜನೆಯ ಮೊದಲ ಹಂತ ಅನುಷ್ಠಾನದ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಚರ್ಚಿಸಿದರು..
ಹೆದ್ದಾರಿ ಎರಡೂ ಕಡೆಯಿಂದ ಬಸ್ ನಿಲ್ದಾಣ, ಆರ್.ಟಿ.ಓ. ವೃತ್ತ ಸೇರಿದಂತೆ ನಗರ ಪ್ರವೇಶಿಸುವ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದು ಫ್ಲೈ ಓವರ್ ಮುಖ್ಯ ಉದ್ಧೇಶವಾಗಿರಬೇಕು. ಅದೇ ರೀತಿಯಲ್ಲಿ ವಿನ್ಯಾಸ ರೂಪಿಸಬೇಕು ಎಂದರು.
ಇದಾದ ಬಳಿಕ ಪೀರನವಾಡಿಯವರೆಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಬಹುದು.
ರೈಲ್ವೆ ಮೇಲ್ಸೇತುವೆ ವಿನ್ಯಾಸ-ಲೋಕೋಪಯೋಗಿ ಇಲಾಖೆಯ ಜತೆ ಚರ್ಚಿಸಲು ಸಲಹೆ:
ನಗರದ ಮೊದಲ ಹಾಗೂ ಎರಡನೇ ಗೇಟ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಟೆಂಡರ್ ಗಳನ್ನು ಕೂಡಲೇ ಕರೆಯಬೇಕು. ಇದಕ್ಕೂ ಮುಂಚೆ ಮಹಾನಗರ ಪಾಲಿಕೆ, ಲೋಕೋಪಯೋಗಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ವಿನ್ಯಾಸವನ್ನು ಅಂತಿಮಗೊಳಿಸಬೇಕು ಎಂದು ತಿಳಿಸಿದರು.
ರೈಲ್ವೆ ಇಲಾಖೆಯು ರಸ್ತೆ ಮೇಲ್ಸೆತುವೆ ಹಾಗೂ ಅಂಡರ್ ಪಾಸ್ ಗಳು ಅವೈಜ್ಞಾನಿಕವಾಗಿದ್ದು, ಜನರಿಗೆ ತೀವ್ರ ಅನಾನುಕೂಲ ಆಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಯಾವುದೇ ರಸ್ತೆ ಮೇಲ್ಸೆತುವೆ ಹಾಗೂ ಅಂಡರ್ ಪಾಸ್ ನಿರ್ಮಿಸುವಾಗ ಕಡ್ಡಾಯವಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ವಿನ್ಯಾಸವನ್ನು ಅಂತಿಮಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ರಿಂಗ್ ರಸ್ತೆ ನಿರ್ಮಾಣದ ಬಳಿಕ ಬೆಳಗಾವಿ ನಗರದಲ್ಲಿ ಟ್ರಾಫಿಕ್ ಹಾಗೂ ಸಂಚಾರದ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ಇದೇ ರೀತಿ ಪೀರನವಾಡಿ ಬಳಿಯೂ ಸಂಚಾರ ದಟ್ಟಣೆ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಇಲ್ಲಿಯೂ ಕೂಡ ರಸ್ತೆ ಮೇಲ್ಸೇತುವೆ ನಿರ್ಮಿಸಬಹುದು ಎಂಬುದನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಚಿವರ ಗಮನಕ್ಕೆ ತಂದರು.
ಬೆಳಗಾವಿ ನಗರದಲ್ಲಿ ಬಹುಮಹಡಿ ಕಟ್ಟಡ:
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ವಿವಿಧ ಸರಕಾರಿ ಕಚೇರಿಗಳ ಜಾಗೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿನ್ಯಾಸವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು.ಅಲ್ಲದೆ
ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.